ಕೊರೊನಾದಿಂದಾಗಿ ಶಾಲೆಗಳು ತೆರೆಯದೆ ಇದ್ದ ಕಾರಣ ಕಳೆದ ಎರಡು ವರ್ಷಗಳಿಂದ ಆನ್‌ಲೈನ್ ಕ್ಲಾಸ್ ಮೂಲಕ ಮಕ್ಕಳಿಗೆ ಪಾಠ ಹೇಳಲಾಗುತ್ತಿದೆ. ಆನ್‌ಲೈನ್ ಮೂಲಕ ಕ್ಲಾಸ್ ಮಾಡುವ ವಿಧಾನ, ಬಹುತೇಕ ಮಕ್ಕಳಿಗೆ ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟ ಆಗಿ ಕಿರಿಕಿರಿ ಅನುಭವಿಸುತ್ತಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯಿಂದ ಆನ್‌ಲೈನ್ ಕಲಿಕೆಗೆ ಸ್ಪೆಷಲ್ ಆ್ಯಪ್ ರೆಡಿ ಮಾಡಲಾಗಿದೆ.
ಈ ಮೂಲಕ ವಿದ್ಯಾರ್ಥಿಗಳಿಗೆ ಕಿಚ್ಚ ಸುದೀಪ್ ಅವರಿಂದ ವಿಶೇಷ ಉಡುಗೊರೆ ಸಿಗುತ್ತಿದೆ. ಸುದೀಪ್ ಮಾಡಿರುವ ಪ್ಲಾನ್ನಿಂದ ಆನ್‌ಲೈನ್ ಕ್ಲಾಸ್ನಲ್ಲಿ ಪಾಠ ಕಲಿಯೋದು ಬಲು ಸುಲಭ ಮತ್ತು ಸುಂದರವಾಗಿದೆ.
ಇನ್ಮುಂದೆ ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸ್ನಲ್ಲಿ ಕಷ್ಟಪಡಬೇಕಿಲ್ಲ. ಪಠ್ಯ ಅರ್ಥ ಆಗೋ ಹಾಗೆ ಪಾಠ ಮಾಡಲು ಹೊಸ ಆ್ಯಪ್ ಬರುತ್ತಿದೆ. ಅದುವೇ ಡಾರ್ಕ್ ಬೋರ್ಡ್ ಆನಿಮೇಷನ್ ಎಜುಕೇಷನ್. ಆ ಆ್ಯಪ್ ಬಳಸಿ ಆನ್‌ಲೈನ್ ಕ್ಲಾಸ್ ಮಾಡಬಹುದು. ಈ ಹೊಸ ಆ್ಯಪ್ನಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಹಾಗೆಯೇ ಶಿಕ್ಷಕರು ಪಾಠವನ್ನು ಚೆನ್ನಾಗಿ ಅರ್ಥವಾಗುವ ರೀತಿಯಲ್ಲಿ ಮಾಡಲು ಈ ಆ್ಯಪ್ ಬಳಸಬಹುದು. ಇದರ ಜೊತೆಗೆ ಶಾಲೆಯಲ್ಲಿ ಡಾರ್ಕ್ ಬೋರ್ಡ್ ರೂಂ ಮಾಡಿಯೂ ಪಾಠ ಹೇಳಿಕೊಡಬಹುದು. ಇನ್ನು ಯಾವುದೇ ವಿಷಯದ ಮೇಲೆ ಪಾಠ ಮಾಡಿ ರೆಕಾರ್ಡ್ ಮಾಡಿ ಕೂಡ ವಿದ್ಯಾರ್ಥಿಗಳಿಗೆ ಕಳುಹಿಸಬಹುದು. ಈ ಡಾರ್ಕ್ ಬೋರ್ಡ್ ಪಾಠ ಕೇಳಿದ್ರೆ ಮಕ್ಕಳು ಶಿಕ್ಷಕರ ಮುಂದೆ ಕೂತು ಪಾಠ ಕೇಳಿದ ಹಾಗಿರುತ್ತೆ.
ಈಗ ಆನ್‌ಲೈನ್ ಕ್ಲಾಸ್ನಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಬೆನ್ನು ನೋಡಿಕೊಂಡು ಪಾಠ ಕೇಳುತ್ತಿದ್ದಾರೆ. ಆದರೆ ಈ ಡಾರ್ಕ್ ಬೋರ್ಡ್ ಕ್ಲಾಸ್ನಲ್ಲಿ ಪಾಠ ಕೇಳಿದ್ರೆ ಶಿಕ್ಷಕರು ಹಾವ,ಭಾವವನ್ನು ನೋಡಿ ವಿದ್ಯೆ ಕಲಿಯಬಹುದು. ಡ್ರಾಯಿಂಗ್ ಬರೆದು ಕೂಡ ಪಾಠ ಮಾಡಲು ಸಹಾಯವಾಗುತ್ತೆ. ಇದರಿಂದ ಪಾಠ ಕೇಳಿದ್ರೆ ಮಕ್ಕಳಿಗೆ ತಕ್ಷಣ ಪಾಠ ತಲೆಗೆ ಹೋಗುತ್ತೆ. ಈ ಆ್ಯಪ್ ಅನ್ನು ಎಲ್ಲಾ ಸರ್ಕಾರಿ ಶಾಲೆ, ಖಾಸಗಿ ಶಾಲೆಯವರು ಬಳಸಿಕೊಳ್ಳಬಹುದಾಗಿದೆ.
ರಾಜ್ಯ ಸರ್ಕಾರಕ್ಕೂ ಈ ಆ್ಯಪ್ ಬಗ್ಗೆ ಮನವರಿಕೆ ಮಾಡಿ ಕೊಡಲು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಮುಂದಾಗಿದೆ. ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಈ ಡಾರ್ಕ್ ಬೋರ್ಡ್ ಕ್ಲಾಸ್ ಬಗ್ಗೆ ತಿಳಿಸಲಿದ್ದಾರೆ.
ಅಲ್ಲದೇ, ಕಿಚ್ಚ ಸುದೀಪ್ ದತ್ತು ಪಡೆದಿರುವ ಶಾಲೆಗಳಲ್ಲಿ ಈ ಡಿಜಿಟಲೈಸ್ ಕೆಲಸ ನಡೆಯುತ್ತಿದೆ. ದತ್ತು ಪಡೆದ ಶಾಲೆಗಳನ್ನು ಸಂಪೂರ್ಣ ಡಿಜಿಟಲ್ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಸದ್ಯ ಸುದೀಪ್ ದತ್ತು ಪಡೆದ ಶಾಲೆಗಳಲ್ಲಿ ಈ ಡಾರ್ಕ್ ಬೋರ್ಡ್ ಆ್ಯಪ್ ಬಳಕೆ ಮಾಡಲಾಗುತ್ತೆ. ಆ ನಂತರ ಎಲ್ಲಾ ಶಾಲಾ ಶಿಕ್ಷಕರಿಗೂ ಈ ಡಾರ್ಕ್ ಬೋರ್ಡ್ ಬಳಸಿಕೊಳ್ಳಲು ಉತ್ತೇಜಿಸುವ ಕೆಲಸ ಮಾಡುತ್ತೇವೆ. ಡಾರ್ಕ್ ಬೋರ್ಡ್ ಕ್ಲಾಸ್ ಅನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುವ ಹಾಗೆ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ರಮೇಶ್ ಕಿಟ್ಟಿ ಹೇಳಿದ್ದಾರೆ.