ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರ ಬಿಡುಗಡೆಯಾದ ಮೇಲೆ ಚಿತ್ರದಲ್ಲಿ ನಟಿಸಿದ ಅನೇಕ ಪೋಷಕ ನಟರು ರಾತ್ರೋರಾತ್ರಿ ಸ್ಟಾರ್ಗಳಾಗಿಬಿಟ್ಟರು. ಕೆಜಿಎಫ್ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿದವರಿಗೂ ಕೂಡ ಅದೃಷ್ಟ ಖುಲಾಯಿಸಿತು. ಇದಕ್ಕೆ ಸಾಕ್ಷಿ ಚಿತ್ರದಲ್ಲಿ ಗಣಿ ಧೂಳಿನಲ್ಲಿ ವಯೋವೃದ್ದ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕೃಷಪ್ಪ.
ಹೌದು, ಕೆಜಿಎಫ್ ಚಿತ್ರದ ಕೃಪಕಟಾಕ್ಷದಿಂದ ಸಾಲು ಸಾಲು ಚಿತ್ರಗಳಲ್ಲಿ ನಟಿಸಲು ಕೃಷಪ್ಪ ಅವರಿಗೆ ಅವಕಾಶಗಳು ಅರಸಿ ಬಂದಿದ್ದು, ಒಂದಲ್ಲ ಎರಡಲ್ಲ , ಬರೋಬ್ಬರಿ ಎಂಟು ಚಿತ್ರಗಳಲ್ಲಿ ಅವರೀಗ ನಟಿಸುತ್ತಿದ್ದಾರೆ.
ಈ ವಿಷಯವನ್ನು ಸ್ವತಃ ಕೃಷ್ಣಪ್ಪ ಅವರು ಹೇಳಿಕೊಂಡಿದ್ದಾರೆ. ಕೆಜಿಎಫ್ ಚಿತ್ರದಿಂದ ನನಗೆ ಒಳ್ಳೆ ಮೈಲೇಜ್ ಸಿಕ್ಕಿತು. ನಾನು ಇದಕ್ಕೂ ಮುಂಚೆ ಶಂಕರ್ ನಾಗ್, ಎಸ್ ಮಹೇಂದರ್, ವಿಜಯರೆಡ್ಡಿ ,ಸೋಮಶೇಖರ್ , ಹಾಗೂ ಕೆವಿ ಜಯರಾಮ್ ಅವರಂತಹ ದಿಗ್ಗಜ ನಿರ್ದೇಶಕರ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಅಲ್ಲದೆ ಚಿಕ್ಕ ಪುತ್ರ ಪಾತ್ರಗಳನ್ನು ಮಾಡಿದ್ದೆ. ಆದರೆ, ನನಗೆ ಕೆಜಿಎಫ್ ಚಿತ್ರವೇ ಹೆಚ್ಚು ಮೈಲೇಜ್ ತಂದುಕೊಟ್ಟಿದೆ. ಕೆಜಿಎಫ್ ಚಿತ್ರ ಬಿಡುಗಡೆಯಾದ ಮೇಲೆ ನಾನು ಪೊಗರು, ಖಾಕಿ, ಭಾಗ್ಯಶ್ರೀ, ಮನೆಗೊಬ್ಬ ಮಂಜುನಾಥ ಸೇರಿದಂತೆ ಸುಮಾರು ಎಂಟು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ. ಅಲ್ಲದೆ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲೂ ಸಹ ನನ್ನ ಪಾತ್ರವಿದೆ ಎಂದು ಕೃಷ್ಣಪ್ಪ ಹೇಳಿದ್ದಾರೆ.