ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್-2 ಚಿತ್ರ ಬಿಡುಗಡೆ ದಿನಾಂಕ ಕೊನೆಗೂ ಫಿಕ್ಸ್ ಆಗಿದ್ದು, ಚಿತ್ರತಂಡದಿಂದ ದಿನಾಂಕ ಘೋಷಣೆಯಾಗಿದೆ.
ದೇಶಾದ್ಯಂತ ಈ ಚಿತ್ರ ಜುಲೈ 16ರಂದು ರಿಲೀಸ್ ಆಗಲಿದೆ. ಇದಕ್ಕೆ ಸಂಬಂಧಿಸಿದಂತೆ ಹೊಂಬಾಳೆ ಫಿಲಂಸ್, ಯಶ್ ಹಾಗೂ ಪ್ರಶಾಂತ್ ನೀಲ್ ಟ್ವಿಟರ್ ಅಕೌಂಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕೆಜಿಎಫ್ ಈಗಾಗಲೇ ಕನ್ನಡ ಚಿತ್ರರಂಗ ಅಲ್ಲದೇ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ. ಜನವರಿ 8ರ ಯಶ್ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾದ ಕೆಜಿಎಫ್-2 ಟೀಸರ್ ವೀಕ್ಷಕರ ವಿಚಾರದಲ್ಲಿ ಭಾರತೀಯ ಚಿತ್ರರಂಗದ ಇತರ ಸಿನಿಮಾಗಳ ದಾಖಲೆ ಮುರಿದಿದೆ.
ಬಹುನಿರೀಕ್ಷಿತ ಚಿತ್ರ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದರು.