ಕೆಜಿಎಫ್ ಕನ್ನಡ ಚಿತ್ರರಂಗ ಅಲ್ಲದೇ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಜುಲೈ 16ರಂದು ಕೆಜಿಎಫ್ ಚಾಪ್ಟರ್ 2 ದೇಶಾದ್ಯಂತ ರಿಲೀಸ್ ಮಾಡುವುದಾಗಿ ಚಿತ್ರತಂಡ ಪ್ರಕಟಿಸಿತ್ತು. ಕೊರೊನಾ ಕಾರಣದಿಂದಾಗಿ ಈ ಬಾರಿಯೂ ಚಿತ್ರ ಬಿಡುಗಡೆಯನ್ನು ಮುಂದೂಡಲಾಗುತ್ತದೆ ಎನ್ನಲಾಗಿದೆ.
ನಟ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್-2 ಚಿತ್ರವನ್ನು ಕಳೆದ ವರ್ಷ ಅಕ್ಟೋಬರ್ 23ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಹಾಜರಾತಿ ಇಲ್ಲದ ಕಾರಣ ಬಿಡುಗಡೆ ಮುಂದೂಡಲಾಗಿತ್ತು. ಬಳಿಕ ಈ ವರ್ಷದ ಜುಲೈ 16ರಂದು ದೇಶಾದ್ಯಂತ ರಿಲೀಸ್ ಮಾಡುವುದಾಗಿ ಚಿತ್ರತಂಡ ಪ್ರಕಟಿಸಿತ್ತು. ಆದರೆ, ಕೊರೊನಾ ಕಾರಣದಿಂದಾಗಿ ಈ ಬಾರಿಯೂ ಚಿತ್ರ ಬಿಡುಗಡೆಯನ್ನು ಮುಂದೂಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಲಾಕ್‌ಡೌನ್ ಕಾರಣದಿಂದ ಈಗಾಗಲೇ ಹಲವು ಪ್ಯಾನ್ ಇಂಡಿಯಾ ಚಿತ್ರಗಳನ್ನು ಮುಂದೂಡಲಾಗಿದೆ. ಮೇ 13ರಂದು ಬಿಡುಗಡೆಯಾಗಬೇಕಿದ್ದ ಚಿರಂಜೀವಿ ಅಭಿನಯದ ಆಚಾರ್ಯ, ಅಲ್ಲು ಅರ್ಜುನ್ ಅಭಿನಯದ ಪುಷ್ಪಾ, ಪ್ರಭಾಸ್ ಅಭಿನಯದ ರಾಧೇ ಶ್ಯಾಮ್ ಮತ್ತು ರಾಜಮೌಳಿ ನಿರ್ದೇಶನನದ ಆರ್‌ಆರ್‌ಆರ್ ಚಿತ್ರಗಳ ಬಿಡುಗಡೆಯನ್ನು ಸಹ ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ಈ ಪೈಕಿ ಪುಷ್ಪಾ ಮತ್ತು ರಾಧೇ ಶ್ಯಾಮ್ ಚಿತ್ರಗಳು ಇದೇ ವರ್ಷದ ಕೊನೆಯಲ್ಲಿ ಬಿಡುಗಡೆಯಾದರೆ, `ಆರ್‌ಆರ್‌ಆರ್' 2022ರ ಸಂಕ್ರಾಂತಿ ವೇಳೆಗೆ ಬಿಡುಗಡೆಯಾಗಲಿದೆಯಂತೆ.
ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇನ್ನೆರಡು ತಿಂಗಳುಗಳಲ್ಲಿ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಮುಗಿದರೂ ಶೇ 100ರಷ್ಟು ಹಾಜರಾತಿಗೆ ಅನುಮತಿ ಸಿಗುತ್ತದೆ ಎಂದು ಹೇಳುವುದು ಕಷ್ಟ. ಇಷ್ಟೆಲ್ಲಾ ಗೊಂದಲಗಳ ಮಧ್ಯೆ ಚಿತ್ರ ಬಿಡುಗಡೆ ಮಾಡುವ ಬದಲು, ಮುಂದಕ್ಕೆ ಹಾಕಿದರೆ ಒಳ್ಳೆಯದು ಎಂಬ ಚರ್ಚೆ ಚಿತ್ರತಂಡ ನಡೆಸಿದೆ. ಅತೀ ಶೀಘ್ರದಲ್ಲೇ ಚಿತ್ರತಂಡ ತಮ್ಮ ಮುಂದಿನ ನಡೆ ಪ್ರಕಟಿಸಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: 100 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣಕ್ಕೆ ಕೈಜೋಡಿಸಿದ ನಟಿ ಹುಮಾ ಖುರೇಷಿ