ಆರಂಭದಿಂದಲೂ ‘ಕನ್ನಡತಿ’ ಧಾರಾವಾಹಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿದೆ. ನಿರ್ದೇಶಕ ಟಿ ಎನ್ ಸೀತಾರಾಮ್ ಅವರು ಈ ಧಾರಾವಾಹಿಯ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸದ್ಯ ಈ ಧಾರಾವಾಹಿಯಲ್ಲಿ ಸಿಂಚನಾ ಎಂಬ ಹೊಸ ಪಾತ್ರ ಪರಿಚಯವಾಗುತ್ತಿದೆ. ಈಕೆ ವರುಧಿನಿ ದೊಡ್ಡಮ್ಮನ ಮಗಳಾಗಿ ನಟಿಸುತ್ತಿದ್ದಾರೆ.

ಅಂದಹಾಗೆ, ಸಿಂಚನಾ ಪಾತ್ರದಲ್ಲಿ ನಟಿಸುತ್ತಿರುವ ಈ ಮುದ್ದು ಬೆಡಗಿಯ ಹೆಸರು ಅನನ್ಯ ಮೋಹನ್. ಅನನ್ಯ ಮೋಹನ್ ಬೇರಾರೂ ಅಲ್ಲ, ನಟಿ ವತ್ಸಲ ಮೋಹನ್ ಅವರ ಪುತ್ರಿ. ವತ್ಸಲ ಮೋಹನ್ ಸಹ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತ ಮುಖ. ಟಿ. ಎನ್. ಸೀತಾರಾಮ್ ಅವರ ಬಹುತೇಕ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ.


ವತ್ಸಲ- ಮೋಹನ್ ದಂಪತಿಯ ಮಗಳಾದ ಅನನ್ಯ ಹುಟ್ಟಿ ಬೆಳೆದದ್ದು ಬಸವನಗುಡಿಯ ಎನ್ ಆರ್ ಕಾಲೋನಿಯಲ್ಲಿ. ಕುಮಾರನ್ಸ್ ಚಿಲ್ಡ್ರನ್ಸ್ ಹೋಂನಲ್ಲಿ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿದ ಅನನ್ಯ, ವಿವಿ ಪುರಂನ ಜೈನ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು. ಆ ನಂತರ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ಬಿಕಾಂ ಮಾಡಿದರು. ಅದೇ ಕಾಲೇಜಿನಲ್ಲಿ 2019ರಲ್ಲಿ ಸ್ನಾತಕೋತ್ತರ ಪದವಿ ಸಹ ಪಡೆದಿದ್ದಾರೆ. ನಂತರ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಎಂಎನ್ಸಿ ಕಂಪನಿಗೆ ಆಯ್ಕೆಯಾದರು.


'ಮುಕ್ತ' ಧಾರಾವಾಹಿಯಲ್ಲಿ ತಾಯಿ ವತ್ಸಲ ಮೋಹನ್ ಅವರ ಜೊತೆಯಲ್ಲೇ ಮಗಳ ಪಾತ್ರದಲ್ಲಿ ನಟಿಸಿದ್ದಾರೆ ಅನನ್ಯ. ಅದರಲ್ಲಿ ಅವರ ಹೆಸರು ಫಲ್ಗುಣಿ. ಆಗಿನ್ನೂ ಅನನ್ಯ 3ನೇ ತರಗತಿ ಓದುತ್ತಿದ್ದರು. ಅನನ್ಯ ಅದ್ಭುತ ಪ್ರತಿಭಾವಂತೆ. ನಿರುಪಮಾ ರಾಜೇಂದ್ರ ಅವರ ಬಳಿ 7ವರ್ಷಗಳ ಕಾಲ ಕಥಕ್ ಕಲಿತಿದ್ದು, ಕರ್ನಾಟಕ ಸಂಗೀತದಲ್ಲಿ ಜ್ಯೂನಿಯರ್ ಮಾಡಿದ್ದಾರೆ. ಚೆನ್ನಾಗಿ ಹಾಡುತ್ತಾರೆ.
