ಕನ್ನಡ ಬರುವುದಿಲ್ಲ ಎಂದು ಹೇಳಿರುವ ರಶ್ಮಿಕಾ ಮಂದಣ್ಣ ಬಹಿರಂಗವಾಗಿ ಕನ್ನಡಿಗರ ಬಳಿ ಕ್ಷಮೆ ಕೇಳಬೇಕು. ಕನ್ನಡ ಸಿನಿಮಾಗಳಲ್ಲಿ ರಶ್ಮಿಕಾಗೆ ಯಾವುದೇ ಅವಕಾಶ ನೀಡಬಾರದು ಎಂದು ಕನ್ನಡ ಪರ ಸಂಘಟನೆಗಳು ಒತ್ತಾಯ ಮಾಡಿವೆ.
ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜೈರಾಜ್ ಜೊತೆ ಮಾತನಾಡಿದ ಕನ್ನಡಪರ ಸಂಘಟನೆಗಳ ಸದಸ್ಯರು ನಾವು ಈ ಕುರಿತು ಫಿಲಮ್ ಚೇಂಬರ್ ಬಳಿ ಬಹಳ ದಿನಗಳ ಮುನ್ನ ದೂರು ಸಲ್ಲಿಸಿದ್ದೆವು. ಆಗ ರಶ್ಮಿಕಾ ಅವರನ್ನು ಕರೆಸಿ ಮಾತನಾಡುವುದಾಗಿ ಭರವಸೆ ನೀಡಿದ್ದರು. ಆದರೆ ರಶ್ಮಿಕಾ ಅವರನ್ನು ಚೇಂಬರ್ಗೆ ಕರೆಸಿ ಮಾತನಾಡುವಲ್ಲಿ ವಾಣಿಜ್ಯ ಮಂಡಳಿ ವಿಫಲವಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ. ಈ ಸಂಬಂಧ ಆದಷ್ಟು ಬೇಗ ರಶ್ಮಿಕಾ ಅವರೊಂದಿಗೆ ಮಾತನಾಡಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಂತರ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಡಿ.ಆರ್. ಜೈರಾಜ್, ನಾವು ಈಗಾಗಲೇ ರಶ್ಮಿಕಾ ತಾಯಿ ಸುಮನ್ ಮಂದಣ್ಣ ಜೊತೆ ಮಾತನಾಡಿದ್ದೇವೆ. ಆದರೆ ನನ್ನ ಮಗಳು ಕ್ಷಮೆ ಕೇಳುವಂತ ಯಾವುದೇ ತಪ್ಪು ಮಾಡಿಲ್ಲ ಎಂದು ಆಕೆ ಹೇಳಿದ್ದಾರೆ ಎಂದಾಗ ಜೈರಾಜ್ ಹಾಗೂ ಕನ್ನಡ ಸಂಘಟನೆ ಸದಸ್ಯರ ನಡುವೆ ಮಾತಿನ ಚಕಮಕಿ ಕೂಡಾ ನಡೆಯಿತು. ನೀವು ರಶ್ಮಿಕಾ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದೀರಿ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೈರಾಜ್ ನಾವು ಮತ್ತೊಮ್ಮೆ ರಶ್ಮಿಕಾ ಬಳಿ ಮಾತನಾಡುತ್ತೇವೆ ಎಂದು ಹೇಳಿದರು.