ಸಿನಿಮಾ ತಂಡದವರು ಸಾಮಾನ್ಯವಾಗಿ ಹೇಳುವ ಮಾತೆಂದರೆ, ನಮ್ಮ ಸಿನಿಮಾದಲ್ಲಿ ಮೆಲೋಡಿ ಹಾಡುಗಳಿವೆ, ಒಳ್ಳೆಯ ಲೊಕೇಶನ್ ಇದೆ. ಹಾಡುಗಳು ಸಿನಿಮಾದ ಹೈಲೈಟ್ಸ್ ಎನ್ನುವುದು. ಆದರೆ ಈ ಹಾಡುಗಳಿಲ್ಲದೆ ಸೂಪರ್ ಹಿಟ್ ಆಗಿರುವ ಸಿನಿಮಾಗಳು ಇವೆ. ಇಂತಹದೊಂದು ಪ್ರಯತ್ನ ಕನ್ನಡ ಚಿತ್ರರಂಗದಲ್ಲಿ 1987ರಲ್ಲೇ ನಡೆದಿದೆ ಅನ್ನೋದು ಹೆಮ್ಮೆಯ ವಿಷಯ.
ನಟ ಕಮಲ್ ಹಾಸನ್ ಅಭಿನಯದ ಮೂಕಿ ಕಾಮಿಡಿ ಸಿನಿಮಾ 'ಪುಷ್ಪಕ ವಿಮಾನ'. ಭಾರತೀಯ ಚಿತ್ರರಂಗದಲ್ಲೇ ಹೊಸ ಪ್ರಯೋಗ ಅಂತಾ ಅನ್ನಿಸಿಕೊಂಡ 'ಪುಷ್ಪಕ ವಿಮಾನ' ಚಿತ್ರ 1987ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಒಂದೇ ಒಂದು ಹಾಡುಗಳಿಲ್ಲದೆ, ಸಂಭಾಷಣೆ ಇಲ್ಲದೆ, ಬರೀ ಮೂಕಿ ಅಭಿನಯದಿಂದ ಅಂದಿನ ದಿನಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ರು. ಕಮಲ್ ಹಾಸನ್, ಅಮಲಾ, ಮನದೀಪ್ ರಾಯ್, ಟಿನು ಆನಂದ್, ಫರೀದಾ ಜಲಾಲ್, ಪಿ.ಎಲ್. ನಾರಾಯಣ, ಕೆ.ಎಸ್. ರಮೇಶ್, ಪ್ರತಾಪ್, ಲೋಕ್‌ನಾಥ್ ಹೀಗೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿತ್ತು.
ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ವೈದ್ಯನಾಥನ್ ಹಿನ್ನೆಲೆ ಸಂಗೀತ ಬಿಟ್ಟರೆ ಯಾವುದೇ ಹಾಡುಗಳು ಇರಲಿಲ್ಲ. ಬೆಂಗಳೂರಿನಲ್ಲಿ 35 ವಾರಗಳ ಕಾಲ ಸಿನಿಮಾ ಪ್ರದರ್ಶನವಾಗಿತ್ತು. ಛಾಯಾಗ್ರಾಹಕ ಬಿ.ಸಿ. ಗೌರಿಶಂಕರ್ ಅವರ ಕ್ಯಾಮಾರ ಕೈಚಳಕದಿಂದ ಈ ಚಿತ್ರ ಅಂದಿನ ದಿನಗಳಲ್ಲಿ ಪ್ರೇಕ್ಷಕರ ಮನಗೆದ್ದು ಸೂಪರ್ ಹಿಟ್ ಆಗಿತ್ತು ಅನ್ನೋದು ಅಚ್ಚರಿ ಸಂಗತಿ.
ಕನ್ನಡ ಚಿತ್ರರಂಗದಲ್ಲಿ ಹಾಡುಗಳಿಲ್ಲದೆ ಸಕ್ಸಸ್ ಕಂಡ ಮತ್ತೊಂದು ಸಿನಿಮಾ ಡಾ. ವಿಷ್ಣುವರ್ಧನ್ ಅಭಿನಯದ 'ನಿಷ್ಕರ್ಷ'. ಸಸ್ಪೆನ್ಸ್ ಕಮ್ ಥ್ರಿಲ್ಲರ್ ಸಿನಿಮಾಗಳ ಮಾಸ್ಟರ್ ಎಂದು ಬ್ಯ್ರಾಂಡ್ ಆಗಿದ್ದ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ರು. ಒಂದು ಬ್ಯಾಂಕ್ ದರೋಡೆಯನ್ನು ಅಧ್ಬುತವಾಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಇಡೀ ಸಿನಿಮಾವನ್ನು ಒಂದೇ ಕಟ್ಟಡದಲ್ಲಿ ಚಿತ್ರೀಕರಣ ಮಾಡಿ ಅಂದಿನ ಕಾಲಕ್ಕೆ ಬಹು ದೊಡ್ಡ ಸಾಹಸ ಮಾಡಿದ್ದರು. ವಿಷ್ಣುವರ್ಧನ್ ಈ ಚಿತ್ರದಲ್ಲಿ ಕಮಾಂಡೋ ಅಜಯ್ ಆಗಿ ಮಿಂಚಿದ್ರು. 1993ರಲ್ಲಿ ತೆರೆ ಕಂಡ 'ನಿಷ್ಕರ್ಷ' ಸಿನಿಮಾದಲ್ಲಿ ಅದ್ಭುತ ಕಥೆ ಇದ್ದಿದ್ದರಿಂದ ಎಲ್ಲೂ ಹಾಡುಗಳನ್ನು ಬಳಸಲು ಜಾಗವೇ ಇರಲಿಲ್ಲ. ಅಷ್ಟು ಸಸ್ಪೆನ್ಸ್ ಹಾಗೂ ಥ್ರಿಲ್ಲಿಂಗ್ ಆಗಿ ನಿರ್ದೇಶಕ ಸುನಿಲ್ ಕುಮಾರ್ ಕಥೆ ಮಾಡಿದ್ದರು.
ಈ ಚಿತ್ರದ ಮೂಲಕ ಬಿ.ಸಿ. ಪಾಟೀಲ್ ಖಳ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅಷ್ಟೇ ಅಲ್ಲ ಅಂದಿನ ದಿನಗಳಲ್ಲಿ 12 ಲಕ್ಷ ರೂಪಾಯಿ ಬಂಡವಾಳ ಹೂಡಿ ಈ ಸಿನಿಮಾ ನಿರ್ಮಾಣ ಮಾಡಿದ್ರು. ಈ ಚಿತ್ರದಲ್ಲಿ ಅನಂತ್ ನಾಗ್, ಗುರುಕಿರಣ್, ಪ್ರಕಾಶ್ ರೈ, ಅವಿನಾಶ್, ರಮೇಶ್ ಭಟ್ ಸುಮನ್ ನಗರ್ಕರ್ ನಟಿಸಿದ್ದರು. ಒಂದೇ ಒಂದು ಹಾಡುಗಳಿಲ್ಲದ 'ನಿಷ್ಕರ್ಷ' ಸಿನಿಮಾ ಆಗಲೇ ಸೂಪರ್ ಹಿಟ್ ಎನಿಸಿತ್ತು.
ದೆವ್ವ ಹಾಗೂ ಪ್ರೇತಾತ್ಮದ ಕಥೆ ಆಧರಿಸಿ ಬಂದ '6-5=2' ಚಿತ್ರ 2013ರಲ್ಲಿ ಸ್ಯಾಂಡಲ್ವುಡ್ನಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿತು. 2010ರಲ್ಲಿ ನಡೆದ ನೈಜ ಘಟನೆಯನ್ನು ಯುವ ನಿರ್ದೇಶಕ ಕೆ.ಎಸ್. ಅಶೋಕ್ ತೆರೆ ಮೇಲೆ ತಂದು ಸಕ್ಸಸ್ ಆದರು. ದರ್ಶನ ಅಪೂರ್ವ, ಕೃಷ್ಣ ಪ್ರಕಾಶ್, ವಿಜಯ್ ಚೆಂಡೂರ್ ಹೀಗೆ ಎಲ್ಲಾ ಹೊಸ ಪತಿಭೆಗಳು ನಟಿಸಿದ್ದ '6-5=2' ಚಿತ್ರ ಹಾರರ್ ಜೊತೆ ಥ್ರಿಲ್ಲಿಂಗ್ ಹಾಗೂ ಸಸ್ಫೆನ್ಸ್ನಿಂದ ಕೂಡಿತ್ತು. ಐದು ಮಂದಿ ಗೆಳೆಯರು ದಟ್ಟವಾದ ಅರಣ್ಯಕ್ಕೆ ಟ್ರಕ್ಕಿಂಗ್ ಅಂತಾ ಹೋದಾಗ ದೆವ್ವದ ಕಾಟಕ್ಕೆ ಹೇಗೆ ಪ್ರಾಣ ಕಳೆದುಕೊಳ್ಳುತ್ತಾರೆ ಅನ್ನೋದು ಚಿತ್ರದ ಕಥೆ. ಈ ಚಿತ್ರಕ್ಕೆ ಅದ್ಭುತ ಹಿನ್ನೆಲೆ ಸಂಗೀತ ಬಿಟ್ಟರೆ ಚಿತ್ರದಲ್ಲಿ ಹಾಡುಗಳು ಇರಲಿಲ್ಲ.
ಭಯ ಹುಟ್ಟಿಸುವ ಚಿತ್ರಕಥೆ ಇದ್ದ ಕಾರಣ ಈ ಚಿತ್ರದಲ್ಲಿ ಹಾಡುಗಳನ್ನು ಬಳಸಬೇಕು ಎಂದು ನಿರ್ದೇಶಕರಿಗೆ ಅನ್ನಿಸಲಿಲ್ಲವಂತೆ. ಅಶೋಕ್ನಿಂದ ಹಿಡಿದು, ಕಲಾವಿದರವರೆಗೂ ಎಲ್ಲಾ ಹೊಸಬರು. ಇವರನ್ನು ನಂಬಿ ನಿರ್ಮಾಪಕ ಕೃಷ್ಣ ಚೈತನ್ಯ ಈ ಚಿತ್ರಕ್ಕೆ ಬಂಡವಾಳ ಹೂಡಿ ಸಕ್ಸಸ್ ಕೂಡಾ ಕಂಡರು. ಈ ಚಿತ್ರ ಹಾಡುಗಳಿಲ್ಲದೆ ಬಾಕ್ಸ್ ಆಫೀಸಿನಲ್ಲಿ ಸಿಕ್ಕಾಪಟ್ಟೆ ದುಡ್ಡು ಮಾಡಿತ್ತು.
ಇನ್ನು ರೊಮ್ಯಾಂಟಿಕ್ ಲವ್ ಸ್ಟೋರಿ ಎಂದ ಮೇಲೆ ಅಲ್ಲಿ ಹಾಡುಗಳಿಗೆ ಹೆಚ್ಚು ಆದ್ಯತೆ ಇರುತ್ತದೆ. ಆದರೆ 'ದಿಯಾ' ಸಿನಿಮಾದಲ್ಲಿ ಒಂದು ಹಾಡೂ ಇಲ್ಲದೆ ಈ ವರ್ಷದ ಹಿಟ್ ಸಿನಿಮಾಗಳ ಸಾಲಿನಲ್ಲಿ ಸೇರಿಕೊಂಡಿದೆ. ದೀಕ್ಷಿತ್, ಪೃಥ್ವಿ ಅಂಬರ್, ಖುಷಿ ರವಿ ಎಂಬ ಯುವ ನಟರನ್ನು ಇಟ್ಟುಕೊಂಡು ನಿರ್ದೇಶಕ ಕೆ.ಎಸ್. ಅಶೋಕ್ ರೊಮ್ಯಾಂಟಿಕ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ರು. ಇಲ್ಲಿ ಗಟ್ಟಿಯಾದ ಕಥೆ ಮಾಡಿದ್ದರಿಂದ ಹಾಡುಗಳ ಅವಶ್ಯಕತೆ ಇರಲಿಲ್ಲ ಎನ್ನುವುದು ನಿರ್ದೇಶಕರ ಅಭಿಪ್ರಾಯ.
ಲವ್ ಸ್ಟೋರಿ ಜೊತೆಗೆ ಎಮೋಷನ್ ಇದ್ದ ಕಾರಣ 'ದಿಯಾ' ಸಿನಿಮಾ ನೋಡುಗರನ್ನು ಬಹಳ ಕಾಡಿತ್ತು. ಹೀಗಾಗಿ 'ದಿಯಾ' ಸಿನಿಮಾ ಹಾಡು ಇಲ್ಲದೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿ ಆಗಿದೆ ಅನ್ನೋದು ಸಿನಿಮಾ ಪಂಡಿತರ ಮಾತು.
ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯೋಗದ ಸಿನಿಮಾಗಳು ಬರ್ತಾ ಇವೆ ಅನ್ನೋದಿಕ್ಕೆ ಪ್ರೇಕ್ಷಕರು ಮೆಚ್ಚಿಕೊಂಡಿರುವ ಈ ಚಿತ್ರಗಳೇ ಸಾಕ್ಷಿ.