ಹೆಸರಾಂತ ಪತ್ರಿಕೆ ಹಾಗೂ ವೆಬ್ಸೈಟ್ಗಳು ಭಾರತದ ಟಾಪ್ 10 ಬಹುನಿರೀಕ್ಷಿತ ಸಿನಿಮಾಗಳು ಯಾವುವು ಎಂಬುದರ ಬಗ್ಗೆ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳ ಜೊತೆಗೆ ಎರಡು ಕನ್ನಡ ಸಿನಿಮಾಗಳು ಕೂಡಾ ಸೇರಿರುವುದು ಬಹಳ ಸಂತೋಷದ ವಿಚಾರ.
ಸಮೀಕ್ಷೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ ಭಾಗ 2' ಎರಡನೇ ಸ್ಥಾನದಲಿದ್ದರೆ, ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಕಬ್ಜ' ಸಿನಿಮಾ ಮೂರನೇ ಸ್ಥಾನದಲ್ಲಿದೆ. ಫೋಟೋಶೂಟ್ ಹಾಗೂ ಟೈಟಲ್ನಿಂದಲೇ ದಕ್ಷಿಣ ಸಿನಿಮಾ ಚಿತ್ರರಂಗದಲ್ಲಿ 'ಕಬ್ಜ' ಸಿನಿಮಾ ಹೆಚ್ಚು ಚರ್ಚೆಯಾಗುತ್ತಿದೆ. 25 ವರ್ಷಗಳ ಹಿಂದೆ ಲವ್ ಹಾಗೂ ರೌಡಿಸಂ ಎರಡನ್ನೂ ಜೊತೆ ಸೇರಿಸಿ 'ಓಂ' ಚಿತ್ರ ಮಾಡಿ ಇಡೀ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ನಟ ಹಾಗೂ ನಿರ್ದೇಶಕ ಉಪೇಂದ್ರ 'ಕಬ್ಜ' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇತ್ತೀಚಿಗೆ ಉಪೇಂದ್ರ ಹಾಗೂ ಶಿವರಾಜ್ಕುಮಾರ್ 'ಓಂ' ಸಿನಿಮಾದ 25 ವರ್ಷಗಳ ಸಂಭ್ರಮವನ್ನು ಆಚರಿಸಿದ್ದರು. 'ಐ ಲವ್ ಯು' ಸಿನಿಮಾ ಮೂಲಕ ಮತ್ತೆ ಬ್ರೇಕ್ ಪಡೆದ ಉಪ್ಪಿ ಕೈಯಲ್ಲಿ ನಿರ್ದೇಶಕ ಆರ್. ಚಂದ್ರು ಈಗ ಲಾಂಗ್ ಹಿಡಿಸಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ಧಾರೆ. ಇದೀಗ ಭಾರತದ ಟಾಪ್ 10 ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಕಬ್ಜ, ಸಿನಿಮಾ ಇರುವುದು ನಿರ್ದೇಶಕ ಆರ್. ಚಂದ್ರು ಹಾಗೂ ಉಪೇಂದ್ರ ಅವರಿಗೆ ಖುಷಿ ಕೊಡುವ ವಿಚಾರ' ಆದರೂ ಈ ಸಿನಿಮಾವನ್ನು ಗೆಲ್ಲಿಸಬೇಕಾದ ಚಾಲೆಂಜ್ ಇಬ್ಬರ ಮೇಲಿದೆ.
ಈಗಾಗಲೇ 80ರ ದಶಕದ ಅದ್ಧೂರಿ ಸೆಟ್ಗಳನ್ನು ಹಾಕಿ, ನಿರ್ದೇಶಕ ಆರ್. ಚಂದ್ರು ಆ್ಯಕ್ಷನ್ ದೃಶ್ಯಗಳನ್ನು ಚಿತ್ರೀಕರಣ ಮಾಡಿದ್ದಾರೆ. ಲಾಕ್ಡೌನ್ ಆರಂಭವಾದಾಗ ಸಿನಿಮಾ ಅರ್ಧದಲ್ಲೇ ನಿಂತಿತ್ತು. ಆದರೆ ಈಗ ಸರ್ಕಾರ ಬಾಕಿ ಇರುವ ಸಿನಿಮಾಗಳ ಚಿತ್ರೀಕರಣಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣವನ್ನು ಮುಂದುವರೆಸಲು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ.