ಸರಿಗಮಪ ಸೀಸನ್ 16ರ ಸ್ಪರ್ಧಿಯಾಗಿ ಸಂಗೀತ ಪ್ರಿಯರ ಮನ ಗೆದ್ದ ಪುಟಾಣಿ ಜ್ಞಾನಳ ಹೆಸರು ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಯಾಗಿದೆ. "ಯಂಗೆಸ್ಟ್ ಸಿಂಗಿಂಗ್ ಸೆನ್ಸೇಷನ್ ಟು ವಿನ್ ಅವಾರ್ಡ್ಸ್ ಫಾರ್ ಕನ್ನಡ ಸಾಂಗ್ಸ್" ಎಂಬ ಸರ್ಟಿಫಿಕೇಟ್ ಜ್ಞಾನ ಗೆದ್ದಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜ್ಞಾನ ತಾಯಿ ರೇಖಾ ಗುರುರಾಜ್, ಅ, ಆ, ಇ, ಈ ಕಲಿಯುವ ವಯಸ್ಸಲ್ಲಿ ಸಂಗೀತದ ಏಳು ಸ್ವರಗಳ ಮೂಲಕ ಮೋಡಿ ಮಾಡಲು ಆರಂಭಿಸಿದ ಪುಟ್ಟ ಬಾಲೆ, ಕನ್ನಡಿಗರ ಮನಸ್ಸು ಗೆದ್ದ ಪೋರಿ ನಮ್ಮ ಪುಟಾಣಿ ಜ್ಞಾನ. ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತ ಹೆಜ್ಜೆ ಇಡುತ್ತಿರುವಾಗಲೇ ಭಾರತದ ಅತೀ ಕಿರಿಯ ವಯಸ್ಸಿನಲ್ಲೇ ಸಂಗೀತದ ಮೂಲಕ ತನ್ನದೇ ಆದ ಛಾಪು ಮೂಡಿಸಿದ ಬಾಲೆ ಅನ್ನುವ ಗರಿಮೆಗೆ ಪಾತ್ರರಾಗಿ, ಕನ್ನಡ ನಾಡಿನ ಭಾಷೆಯ ಸೊಗಡನ್ನು ದೇಶದೆಲ್ಲೆಡೆ ಪಸರಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪಡೆದಿರುತ್ತಾರೆ ನಮ್ಮ ಮುದ್ದು. ಈ ಪುಟ್ಟ ಬಾಲೆಗೆ ಪುತ್ತೂರು ಮಹಾಲಿಂಗೇಶ್ವರನ ಆಶೀರ್ವಾದ ಸದಾ ಇರಲಿ ಎಂದು ಮಗಳ ಹೆಸರಿನ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸುಮಧುರ ಗಾಯನದ ಮೂಲಕ ಸಂಗೀತ ಪ್ರಿಯರ ಮನ ಸೆಳೆದಿರುವ ಈ ಪುಟಾಣಿ ಈಗಾಗಲೇ ಹತ್ತಕ್ಕೂ ಹೆಚ್ಚು ಪ್ರಶಸ್ತಿ ಪಡೆದಿದ್ದಾಳೆ. ಸಂಗೀತ ವಾತಾವರಣದಲ್ಲಿ ಬೆಳೆದ ಜ್ಞಾನ ಎರಡು ವರ್ಷದಿಂದಲೇ ಹಾಡು ಕೇಳುತ್ತಾ ಬೆಳೆದು ಹಾಡು ಗುನುಗುತ್ತಿದ್ದಳು. ತಾಯಿ ರೇಖಾ ಮಗಳ ಸಂಗೀತಾಸಕ್ತಿ ಕಂಡು ಅವಳಿಗೆ ಪಾಠ ಮಾಡಲು ತೊಡಗಿದರು. ಹಂತ ಹಂತವಾಗಿ ಮಗಳಿಗೆ ಸಂಗೀತ ಹೇಳಿ ಕೊಟ್ಟ ರೇಖಾ, ಆಕೆಯ ಸಾಹಿತ್ಯ ಹಾಗೂ ಶ್ರುತಿ ಸರಿ ಮಾಡಿದರು.
ಮುಂದೆ ಸರಿಗಮಪ ಮೂಲಕ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಜ್ಞಾನ ಒಂದಷ್ಟು ವೇದಿಕೆಗಳಲ್ಲಿ ಸಂಗೀತ ಸುಧೆ ಹರಿಸಿದ್ದಾಳೆ. ಇದೀಗ ಅವಳ ಪ್ರತಿಭೆಗೆ ಇನ್ನೊಂದು ಗರಿ ಸೇರಿರುವುದು ಸಂಗೀತ ಪ್ರಿಯರಿಗೆ ಸಂತಸ ತಂದಿದೆ.
ಓದಿ: ರೂಲ್ಸ್ ಬ್ರೇಕ್ ಮಾಡಿದ ಮಲಯಾಳಂ 'ಬಿಗ್ಬಾಸ್': ಚಿತ್ರೀಕರಣ ತಡೆಹಿಡಿದ ಕಂದಾಯ ಇಲಾಖೆ