ಜನಪ್ರಿಯ ನಟಿ, ಮಾಜಿ ಮಂತ್ರಿ ಡಾ. ಜಯಮಾಲ ಕಳೆದ ಎರಡು ತಿಂಗಳಿನಿಂದ ಲಂಡನ್ನಿಂದ ತಮ್ಮ ಮಗಳನ್ನು ವಾಪಸ್ ಬೆಂಗಳೂರಿಗೆ ಕರೆಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಈ ಕುರಿತು ವಿಧಾನ ಪರಿಷತ್ತಿನಲ್ಲೂ ಸಹ ಕೂಗು ಹಾಕಿದ್ದರು.
ಆದರೆ, ಲಾಕ್‌ಡೌನ್ ವಿಶ್ವದಲ್ಲೇ ಜಾರಿ ಇರುವುದರಿಂದ ಜಯಮಾಲ ಅವರ ಪುತ್ರಿ ಸೌಂದರ್ಯ ಬೆಂಗಳೂರಿಗೆ ಬರುವುದು ಅಷ್ಟು ಸುಲಭವಾಗಿರಲಿಲ್ಲ. ಒಮ್ಮೆ ದುಬೈವರೆಗೂ ಬಂದು ಮತ್ತೆ ಲಂಡನ್‌ಗೆ ವಾಪಸ್ ಹೋಗುವಂತೆಯೂ ಆಗಿತ್ತು.
ಇದೀಗ ಜಯಮಾಲ ಅವರ ಮಗಳು ಸೌಂದರ್ಯ ವಾಪಸಾಗಿದ್ದಾರೆ. "ಎರಡು ತಿಂಗಳಿನಿಂದ ಮಗಳ ಬಗ್ಗೆ ಯೋಚಿಸಿ ನಾನು ಜೀವಂತ ಶವ ಆಗಿದ್ದೆ. ನನ್ನ ದೇಹ ಇಲ್ಲಿದ್ದರೂ ಆತ್ಮ ಮಗಳು ಸೌಂದರ್ಯ ಹತ್ತಿರವೇ ಇತ್ತು" ಎಂದು ಜಯಮಾಲ ಮಗಳ ಆಗಮನದ ಬಳಿಕ ಹೇಳಿಕೊಂಡಿದ್ದಾರೆ.
ಲಂಡನ್ ಹೋಟೆಲ್ನಲ್ಲಿ 14 ದಿನ ಕಳೆದು ಬೆಂಗಳೂರಿಗೆ ವಾಪಸಾಗಿರುವ ಸೌಂದರ್ಯ ಮತ್ತೆ 14 ದಿನಗಳ ಕಟ್ಟುನಿಟ್ಟಿನ ಕ್ವಾರಂಟೈನ್ ಎದುರಿಸಬೇಕಿದೆ.
ಸೌಂದರ್ಯ ಜಯಮಾಲಾ ಲಂಡನ್ನಲ್ಲಿ 4 ವರ್ಷದ ವಿದ್ಯಾಭ್ಯಾಸಕ್ಕೆ ತೆರೆಳಿದ್ದರು. ಸ್ವಾನ್ ಸೀ ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಪದವಿ ಪಡೆಯುವುದು ಅವರ ಆಸೆಯಾಗಿತ್ತು.
ಸೌಂದರ್ಯ ಜಯಮಾಲ ‘ಗಾಡ್ ಫಾದರ್’ ಸಿನಿಮಾದಲ್ಲಿ ಉಪೇಂದ್ರ ಅವರಿಗೆ ನಾಯಕಿ ಆಗಿ ಸಿನಿಮಾಗೆ ಎಂಟ್ರಿ ಕೊಟ್ಟವರು. ಆಮೇಲೆ ‘ಪಾರು ವೈಫ್ ಆಫ್ ದೇವದಾಸ್’ ಚಿತ್ರ ಅಷ್ಟೊಂದು ಜನಪ್ರಿಯತೆ ಪಡೆಯಲಿಲ್ಲ. ಬಳಿಕ ಸೌಂದರ್ಯ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿದ್ದರು.