ಬೆಂಗಳೂರು : ನಿನ್ನೆ ಹೃದಯಾಘಾತದಿಂದ ನಟ ಪುನೀತ್ ರಾಜ್‌ಕುಮಾರ್ ನಿಧನರಾಗಿದ್ದಾರೆ. ಶನಿವಾರ ಭೇಟಿಗೆ ಅವಕಾಶ ನೀಡಿದ್ದ ಅಪ್ಪು ಸರ್ ಅಗಲಿಕೆ ಅತೀವ ದುಃಖ ತಂದಿದೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಜೈದ್ ಖಾನ್ ಹೇಳಿದ್ದಾರೆ.
ಗುರುವಾರ ಮಧ್ಯರಾತ್ರಿ ತಾವು ಕರೆ ಮಾಡಿ ಭೇಟಿಗೆ ಕಾಲಾವಕಾಶ ಕೋರಿದ ಸಂದರ್ಭ ಅತ್ಯಂತ ಸಂತೋಷವಾಗಿಯೇ ಒಪ್ಪಿಕೊಂಡಿದ್ದರು. ಆದರೆ, ಶುಕ್ರವಾರ ಬೆಳಗ್ಗೆ ಅವರು ಇನ್ನಿಲ್ಲ ಎಂಬ ವಿಚಾರ ಆಘಾತ ತಂದಿದೆ ಎಂದಿದ್ದಾರೆ.
ಚಿತ್ರರಂಗದಲ್ಲಿ ತಲೆಯೆತ್ತುತ್ತಿರುವ ಅನೇಕ ಯುವ ಕಲಾವಿದರಿಗೆ ಅವರು ಸ್ಫೂರ್ತಿಯಾಗಿದ್ದರು. ಅನೇಕ ನಟ-ನಟಿಯರ ಬೆಳವಣಿಗೆಗೆ ಪೂರಕ ಅವಕಾಶ ಕಲ್ಪಿಸಿದ್ದರು. ಅತ್ಯಂತ ಸರಳ ನಡೆ-ನುಡಿ ಮೂಲಕ ಕನ್ನಡ ಚಿತ್ರರಂಗದಲ್ಲಿ ಒಬ್ಬ ಮಹಾನ್ ಕಲಾವಿದನಾಗಿ ಹೊರ ಹೊಮ್ಮಿದ್ದರು ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಸದ್ಯ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂತ್ಯ ಸಂಸ್ಕಾರಕ್ಕೆ ನಗರದ ಕಂಠೀರವ ಸ್ಟುಡಿಯೋದಲ್ಲಿ ಸಿದ್ಧತೆ ನಡೆದಿದೆ.
ಪುನೀತ್ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನ ಮಾಡಿದೆ. ಅಪ್ಪು ಅಂತ್ಯಸಂಸ್ಕಾರ ನಾಳೆ ಡಾ. ರಾಜ್‌ಕುಮಾರ್ ಅವರ ಸಮಾಧಿ ಪಕ್ಕದಲ್ಲೇ ನೆರವೇರಿಸಲು ನಿರ್ಧರಿಸಲಾಗಿದೆ.
ಓದಿ: ಪುನೀತ್ ರಾಜ್‌ಕುಮಾರ್ ಪುತ್ರಿ ಧೃತಿ ಬೆಂಗಳೂರು ಏರ್ಪೋರ್ಟ್ಗೆ ಆಗಮನ; ಕೆಲವೇ ಕ್ಷಣಗಳಲ್ಲಿ ಕಂಠೀರವ ಸ್ಟೇಡಿಯಂಗೆ