ಬೆಂಗಳೂರು: ಮಲಯಾಳಂ ಸಿನಿಮಾಗಳ ಚೆಲುವೆ, ಕನ್ನಡ ಸಿನಿಮಾಗಳ ಲಕ್ಕಿ ನಟಿ, ಕರ್ನಾಟಕದ ಸೊಸೆ ಜಾಕಿ ಭಾವನ ಇದೀಗ ಮತ್ತೆ ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.
2010ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆ ‘ಜಾಕಿ’ ಸಿನಿಮಾದಿಂದ ಕನ್ನಡದಲ್ಲಿ ಇನ್ನಿಂಗ್ಸ್ ಆರಂಭಿಸಿದ ಭಾವನ ಆಮೇಲೆ ಕಿಚ್ಚ ಸುದೀಪ್ ಜೊತೆ ವಿಷ್ಣುವರ್ಧನ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ರೋಮಿಯೊ ಹಾಗೂ 99, ಉಪೇಂದ್ರ ಅವರ ಜೊತೆ ಟೋಪಿವಾಲಾ, ‘ಚೌಕ’ ಮಲ್ಟಿ ಸ್ಟಾರ್ಸ್ ಸಿನಿಮಾ ಅಲ್ಲದೇ ‘ಟಗರು’ ಸಿನಿಮಾದಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದರು. ಕನ್ನಡದ ನವೀನ್ ಅವರನ್ನು 2018 ಜನವರಿಯಲ್ಲಿ ಕೈ ಹಿಡಿದರು. ಭಾವನ ಹಾಗೂ ಪ್ರಜ್ವಲ್ ದೇವರಾಜ್ ಅಭಿನಯದ ‘ಇನ್ಸ್ಪೆಕ್ಟರ್ ವಿಕ್ರಮ್’ ಬಿಡುಗಡೆ ಆಗಬೇಕಿದೆ. ‘ಭಜರಂಗಿ 2’ ಸಹ ಚಿತ್ರೀಕರಣದಲ್ಲಿದೆ. ಅದಕ್ಕೂ ಮುನ್ನು ಅವರು ‘ಗೋವಿಂದ ಗೋವಿಂದ’ ಸಿನಿಮಾ ಒಪ್ಪಿಕೊಂಡಿದ್ದಾರೆ.
‘ಗೋವಿಂದ ಗೋವಿಂದ’ ತೆಲುಗಿನ ಬ್ರೋಛೇವ ರೆವರುರಾ ಸ್ಫೂರ್ತಿ ಪಡೆದ ಸಿನಿಮಾ ತಿಲಕ್ ನಿರ್ದೇಶನದಲ್ಲೀಗ ಮೂಡಿಬರುತ್ತಿದ್ದು, ಭಾವನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕ ನಟನಾಗಿ ಹೆಸರಾಂತ ನಿರ್ಮಾಪಕ ಶೈಲೇಂದ್ರ ಬಾಬು ಪುತ್ರ ಸುಮಂತ್ ಶೈಲೆಂದ್ರ ಮಿಂಚಲಿದ್ದಾರೆ. ಈವರೆಗೂ ಆಟ, ದಿಲ್ವಾಲಾ, ತಿರುಪತಿ ಎಕ್ಸ್ಪ್ರೆಸ್, ಬೆತ್ತನಗೆರೆ, ಭಲೇ ಜೋಡಿ, ಲೀ ಹಾಗೂ ತೆಲುಗು ಭಾಷೆಯಲ್ಲಿ ಬ್ರಾಂಡ್ ಬಾಬು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಇದೀಗ ಗೋವಿಂದ ಗೋವಿಂದ ಚಿತ್ರದಲ್ಲಿ ತಮ್ಮ ಪ್ರತಿಭೆ ಹೊರಹಾಕಲು ಮುಂದಾಗಿದ್ದಾರೆ.
ಶೈಲೇಂದ್ರ ಬಾಬು ಈ ಚಿತ್ರದ ನಿರ್ಮಾಪಕರಾಗಿದ್ದು, ಹಿತೇಶ್ ಸಂಗೀತ, ಕುಮಾರ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಈಗಾಗಲೇ 10 ದಿವಸಗಳ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರದಲ್ಲಿ ನಟಿ ಕವಿತಾ ಸಹ ಮತ್ತೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.