ಬೆಂಗಳೂರು: ಸದ್ಗುರು ಜಗ್ಗಿ ವಾಸುದೇವ್ ಅವರು ತಮ್ಮ ಕಾವೇರಿ ಕಾಲಿಂಗ್ ಕ್ಯಾಂಪೇನ್ಗಾಗಿ ಸೆಲಬ್ರಿಟಿಗಳನ್ನು ಭೇಟಿಯಾಗುತ್ತಿದ್ದಾರೆ. ಇದೇ ರೀತಿ ಸ್ಯಾಂಡಲ್ವುಡ್ನ ಖ್ಯಾತ ನಟಿ ಹರಿಪ್ರಿಯಾ ಅವರನ್ನು ಎರಡು ವಾರಗಳ ಹಿಂದಷ್ಟೇ ಭೇಟಿಯಾಗಿ ಅವರೊಟ್ಟಿಗೆ ಹರಟೆ ಹೊಡೆದಿದ್ದಾರೆ.
ಈ ವೇಳೆ ಹರಿಪ್ರಿಯಾ ಸದ್ಗುರು ಅವರಿಗೆ ಕೇಳಿದ ಪ್ರಶ್ನೆಯೊಂದನ್ನು ಇಶಾ ಫೌಂಡೇಶನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಳ್ಳಲಾಗಿದೆ. ಸದ್ಗುರು ಅವರೊಟ್ಟಿಗೆ ಮಾತನಾಡುವಾಗ ಹರಿಪ್ರಿಯಾ ಅವರು, ನಾನು ಸ್ವಲ್ಪ ತಿಂಡಿಪೋತಿ. ನನಗೆ ಪ್ರಾಣಿಗಳೆಂದರೆ ತುಂಬ ಇಷ್ಟ. ಜೊತೆಗೆ ನಾನ್ವೆಜ್ ಕೂಡ. ಮಾಂಸಾಹಾರ ಸೇವನೆ ನೈತಿಕವಾಗಿ ತಪ್ಪಾ ಎಂದು ಆಗಾಗ್ಗ ಕೇಳಿಕೊಳ್ಳುತ್ತಿರುತ್ತೇನೆ. ನೀವೇನು ಸಲಹೆ ಕೊಡುತ್ತೀರ ಎಂದು ಕೇಳಿದರು.
- " class="align-text-top noRightClick twitterSection" data="">
ಇದಕ್ಕೆ ನಕ್ಕು ಉತ್ತರಿಸಿದ ಸದ್ಗುರು, ನಿಮಗೆ ಪ್ರಾಣಿಗಳೆಂದ್ರೆ ಇಷ್ಟ ಅದಕ್ಕೆ ನಿಮ್ಮ ಊಟದಲ್ಲಿ ಅವನ್ನು ಸೇರಿಸುತ್ತೀರಾ ಎಂದು ಪ್ರಶ್ನಿಸಿದರು.
ಮೊದಲನೆಯದಾಗಿ ನೀವು ಹೇಳಿದ ಫುಡ್ಡಿ ಪದ ಯಾಕೋ ಸರಿಯಿಲ್ಲವೇನೋ. ಆಹಾರ ನಮಗೆ ಎಷ್ಟು ಅಗತ್ಯವಿದೆಯೋ ಅಷ್ಟನ್ನು ಮಾತ್ರ ಸೇವಿಸಬೇಕು. ಸಸ್ಯಗಳಿಗೂ ಕೂಡ ಮನುಷ್ಯ ತೊಂದರೆ ಕೊಟ್ಟು ಅವುಗಳ ಎಲೆ, ಕಾಯಿ ಕಿತ್ತಾಗ ದೈಹಿಕವಾಗಿ ನೋವಾಗುತ್ತದೆ. ಇದು ಸಾಕಷ್ಟು ಅಧ್ಯಯನದಿಂದ ಗೊತ್ತಾಗಿದೆ. ಆದರೆ, ಅವು ಕೂಗುವ ಶಬ್ದ ನಮಗೆ ಕೇಳುವುದಿಲ್ಲ.
ಒಂದು ಆನೆ ಕಾಡಿನಲ್ಲಿ ಒಂದು ಮರದ ತೊಗಟೆ ಮುರಿದರೆ ಅದು ಪಕ್ಕದ ಗಿಡ, ಮರಗಳಿಗೆ ಸಂದೇಶ ಕಳುಹಿಸುತ್ತದೆ. ಆಗ ಪಕ್ಕದ ಗಿಡಗಳು ತಮ್ಮ ಎಲೆಯಲ್ಲಿ ವಿಷದ ಅಂಶವನ್ನು ಬಿಡುತ್ತವೆ, ಆನೆ ಒಮ್ಮೆ ಅದರ ರುಚಿ ನೋಡಿ ತಿನ್ನದೆ ಹಿಂದಕ್ಕೆ ಸರಿಯುತ್ತದೆ. ಆಹಾರದ ವಿಷಯದಲ್ಲಿ ಆ ರೀತಿಯ ಭಾವನೆ ಬೇಡ. ನೋವು ಪ್ರಾಣಿ, ಸಸ್ಯ ಎರಡಕ್ಕೂ ಆಗುತ್ತದೆ. ಆದರೆ, ಅದರ ಅಗತ್ಯತೆ ನಿಮಗೆಷ್ಟಿದೆ ಎಂಬುದನ್ನು ನೋಡಿಕೊಂಡು ಸೇವಿಸಿ ಎಂದು ಸಲಹೆ ನೀಡಿದರು.