ನ.19 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಟ, ನಿರ್ದೇಶಕ ರಮೇಶ್ ಅರವಿಂದ್ ಅಭಿನಯದ '100' ಚಿತ್ರ(Ramesh Arvind's 100 cinema)ವನ್ನ ಸಿನಿಮಾ ಪ್ರೇಕ್ಷಕರು ಮಾತ್ರವಲ್ಲದೇ ರಾಜಕಾರಣಿಗಳು ಹಾಗು ಗಣ್ಯ ವ್ಯಕ್ತಿಗಳು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
‘100’ ಸಿನಿಮಾವನ್ನು ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ (Infosys chairperson Sudha Murty) ಅವರು ಕೂಡ ವೀಕ್ಷಿಸಿದ್ದು, ಮನಸಾರೆ ಹೊಗಳಿದ್ದಾರೆ. ಬಹಳ ದಿನಗಳ ಬಳಿಕ ಒಂದು ಒಳ್ಳೆಯ ಸಿನಿಮಾ ನೋಡಿದೆ. ಸೈಬರ್ ಕ್ರೈಂ ಕಥೆ ಆಧಾರಿತ ಈ ಸಿನಿಮಾ, ಸೋಷಿಯಲ್ ಮೀಡಿಯಾದಿಂದ ಯುವ ಜನಾಂಗ ಹೇಗೆ ತೊಂದರೆ ಅನುಭವಿಸುತ್ತಿದೆ ಎನ್ನುವುದನ್ನು ಅಚ್ಚುಕಟ್ಟಾಗಿ ನಿರ್ದೇಶಕ ರಮೇಶ್ ಅರವಿಂದ್ ತೋರಿಸಿದ್ದಾರೆ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದರು.
ನಿರ್ಮಾಪಕ ಎಂ ರಮೇಶ್ ರೆಡ್ಡಿ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ '100' ಸಿನಿಮಾ, ನಿಜಕ್ಕೂ ಕುಟುಂಬ ಸಮೇತ ನೋಡಬಹುದಾದ ಚಿತ್ರ. ರಮೇಶ್ ಅರವಿಂದ್ ಜೊತೆಗೆ ನಟಿ ಪೂರ್ಣ ಹಾಗು ರಚಿತಾ ರಾಮ್ ಸೇರಿದಂತೆ ಸಾಕಷ್ಟು ಕಲಾವಿದರು ಬಹಳ ಸೊಗಸಾಗಿ ಅಭಿನಯಿಸಿದ್ದಾರೆ.
ನಿರ್ಮಾಪಕ ಎಂ ರಮೇಶ್ ರೆಡ್ಡಿ, ಸೂರಜ್ ಪ್ರೊಡಕ್ಷನ್ ಹೌಸ್ ಅಡಿ ಸಂದೇಶ ಸಾರುವ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ಎಲ್ಲರೂ ಕುಟುಂಬ ಸಮೇತರಾಗಿ ನೋಡಿ ಎಂದು ಸುಧಾ ಮೂರ್ತಿ ಹೇಳಿದರು.