ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಗು ವಿಶಿಷ್ಠ ಸಿನಿಮಾ ಮಾಡಿ ವಿಶಿಷ್ಠ ರೀತಿಯ ಛಾಪು ಮೂಡಿಸಿದವರು ನಿರ್ದೇಶಕ ಬರಗೂರು ರಾಮಚಂದ್ರಪ್ಪ. 'ಅಮೃತಮತಿ' ಸಿನಿಮಾ ಬಳಿಕ ಬರಗೂರು ಅವರು ಈಗ ಹೊಸದೊಂದು ಸಿನಿಮಾಕ್ಕೆ ಕೈ ಹಾಕಿದ್ದಾರೆ. ಅದುವೇ ಮಹಾತ್ಮ ಗಾಂಧಿ ಅವರ ಕುರಿತಾದ ಸಿನಿಮಾ.
ಬರಗೂರು ರಾಮಚಂದ್ರಪ್ಪ ಅವರೇ ಬರೆದ ಕಸ್ತೂರಿ ಬಾ ವರ್ಸಸ್ ಗಾಂಧಿ ಕಾದಂಬರಿಯನ್ನು ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ತಾಯಿ ಕಸ್ತೂರಿ ವರ್ಸಸ್ ಗಾಂಧಿ ಎಂದು ಟೈಟಲ್ ಇಡಲಾಗಿದೆ. ಮಹಾತ್ಮರ ಪತ್ನಿ ಕಸ್ತೂರಿ ಬಾ ಅವರನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗುತ್ತಿದೆ.
ಒಂದು ಅಚ್ಚರಿಯ ಸಂಗತಿ ಅಂದರೆ ಸ್ಯಾಂಡಲ್ವುಡ್ ಬ್ಯೂಟಿ ಕ್ವೀನ್ ಅಂತಾ ಕರೆಯಿಸಿಕೊಂಡಿರುವ ಹರಿಪ್ರಿಯಾ ಕಸ್ತೂರಿ ಬಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಬಹುಭಾಷಾ ನಟ ಕಿಶೋರ್ ಮಹಾತ್ಮ ಗಾಂಧಿಯಾಗಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಡಾ. ಅಂಬೇಡ್ಕರ್ ಪಾತ್ರದಲ್ಲಿ ಕನ್ನಡದ ಪ್ರಸಿದ್ಧ ಹಿರಿಯ ಕಲಾವಿದರೊಬ್ಬರು ಅಭಿನಯಿಸುವ ಸಾಧ್ಯತೆ ಇದೆ.
ಕಸ್ತೂರಿ ಬಾ ಗಾಂಧಿಯವರ ಜೀವನದ ಮುಖ್ಯ ಘಟನೆಗಳನ್ನು ಆಧರಿಸಿದ ಸಿನಿಮಾವನ್ನು ಕನ್ನಡದಲ್ಲಿ ನಿರ್ಮಾಣ ಮಾಡಲು ಬರಹಗಾರ ಹಾಗೂ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಸಕಲ ಸಿದ್ಧತೆ ನಡೆಸಿದ್ದಾರೆ. ಈ ಸಿನಿಮಾ ಗಾಂಧೀಜಿಯವರ ಬದುಕಿನಲ್ಲಷ್ಟೇ ಅಲ್ಲ, ಭಾರತದ ಬದುಕಿನಲ್ಲಿ ಕಸ್ತೂರಿ ಬಾ ಅವರು ವಹಿಸಿದ ಪಾತ್ರದ ಎಂತಹದ್ದು, ಗಾಂಧೀಜಿಯವರ ಆದರ್ಶವಾದಿ ನಿಲುವು ಮತ್ತು ಹೋರಾಟಗಳ ಹಾದಿಯಲ್ಲಿ ಕಸ್ತೂರಿ ಬಾ ಅವರು ಎದುರಾಗುವ ಮತ್ತು ಒಂದಾಗುವ ಎಲ್ಲಾ ಸನ್ನಿವೇಶಗಳು ಈ ಚಿತ್ರದಲ್ಲಿ ಒಳಗೊಂಡಿರುತ್ತೆ ಅಂತಾ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ. ಈ ಸಿನಿಮಾದ ಸಂಕಲನವನ್ನು ಸುರೇಶ್ ಅರಸು ಅವರು ಮಾಡುತ್ತಿದ್ದಾರೆ.
ನಾಗರಾಜ ಆದವಾನಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಮತ್ತು ಮೈತ್ರಿ ಬರಗೂರ್ ಕಲಾ ನಿರ್ದೇಶನದ ಕೆಲಸ ನಿರ್ವಹಿಸಲಿದ್ದಾರೆ. ಚಿತ್ರಕತೆ, ಸಾಹಿತ್ಯ ಮತ್ತು ಸಂಭಾಷಣೆ ಬರೆದು ನಿರ್ದೇಶನವನ್ನು ಬರಗೂರು ರಾಮಚಂದ್ರಪ್ಪ ಅವರೇ ಮಾಡಲಿದ್ದಾರೆ. ಮುಖ್ಯ ದೃಶ್ಯಗಳನ್ನು ಗುಜರಾತ್‌ನ ಸಬರಮತಿ ಆಶ್ರಮ, ಮಹಾರಾಷ್ಟ್ರದ ವಾರ್ದಾ ಆಶ್ರಮ ಮತ್ತು ಪುಣೆಯ ಆಗಾಖಾನ್ ಬಂಗಲೆಯಂತಹ ಮೂಲ ಸ್ಥಳಗಳಲ್ಲೇ ಚಿತ್ರೀಕರಿಸುವ ಉದ್ದೇಶ ಚಿತ್ರತಂಡಕ್ಕಿದೆ.
ಕೊರೊನಾ ತೀವ್ರತೆ ಕಡಿಮೆಯಾದ ಕೂಡಲೇ ತಾಯಿ ಕಸ್ತೂರಿ ವರ್ಸಸ್ ಗಾಂಧಿ ಚಿತ್ರವು ಸೆಟ್ಟೇರಲಿದೆ. ಈ ಸಿನಿಮಾವನ್ನು ಜನಮಿತ್ರ ಮೂವೀಸ್‌ನ ಶ್ರೀಮತಿ ಗೀತಾ ಅವರು ನಿರ್ಮಾಣ ಮಾಡುತ್ತಿದ್ದಾರೆ.