ಕೊರೊನಾ ಎಂಬ ವೈರಸ್ಗೆ ಇಡೀ ವಿಶ್ವವೇ ನಲುಗುತ್ತಿದೆ. ಸುಮಾರು ಎರಡೂವರೆ ತಿಂಗಳಿಂದ ಬಹುತೇಕ ಕ್ಷೇತ್ರಗಳ ಚಟುವಟಿಕೆ ಬಂದ್ ಆಗಿದೆ. ಅದೇ ರೀತಿ ಕನ್ನಡ ಚಿತ್ರರಂಗ ಕೂಡಾ ಯಾವುದೇ ಚಟುವಟಿಕೆ ಇಲ್ಲದೆ ಕುಳಿತಿದೆ. ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದರೂ ಸಿನಿಮಾ ಚಿತ್ರೀಕರಣಕ್ಕೆ ಇನ್ನೂ ಅನುಮತಿ ದೊರೆತಿಲ್ಲ.
ಸಿನಿಮಾ ಚಟುವಟಿಕೆಗಳು ಯಾವಾಗ ಆರಂಭವಾಗಲಿದೆಯೋ ಎಂದು ಇಡೀ ಚಿತ್ರರಂಗವೇ ಕಾದು ಕುಳಿತಿದೆ. 5ನೇ ಸುತ್ತಿನ ಲಾಕ್ಡೌನ್ನಲ್ಲಿ, ದೇವಸ್ಥಾನ ಸೇರಿದಂತೆ ಇತರ ಧಾರ್ಮಿಕ ಕೇಂದ್ರಗಳು, ಮಾಲ್ಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ ಸಿನಿಮಾ ಚಟುವಟಿಕೆಗಳನ್ನು ನಡೆಸಲು ಇನ್ನೂ ಏಕೆ ಅನುಮತಿ ನೀಡಿಲ್ಲ ಎಂಬ ಪ್ರಶ್ನೆ ಎದುರಾಗಿದೆ.
ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಮಾಪಕರ ವಲಯದ, ಗೌರವ ಕಾರ್ಯದರ್ಶಿ ಹಾಗೂ ನಿರ್ಮಾಪಕ ಎನ್. ಎಂ ಸುರೇಶ್ ಪ್ರತಿಕ್ರಿಯಿಸಿದ್ದಾರೆ. 'ಪರಿಸ್ಥಿತಿ ಇದೇ ರೀತಿ ಮುಂದುವರೆದರೆ, ರೈತರಂತೆ ನಿರ್ಮಾಪಕರು ಕೂಡಾ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಏಕೆಂದರೆ ನಿರ್ಮಾಪಕರು ಸಿನಿಮಾವನ್ನೇ ನಂಬಿ ಬಡ್ಡಿಗೆ ಕೋಟಿ ಕೋಟಿ ರೂಪಾಯಿ ಹಣವನ್ನು ಸಾಲ ಮಾಡಿ ತರುತ್ತಾರೆ. ಆದರೆ ಈ ಲಾಕ್ಡೌನ್ನಿಂದ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ನಷ್ಟವುಂಟಾಗಿದೆ.
ಈ 5ನೇ ಹಂತದ ಲಾಕ್ಡೌನ್ನಲ್ಲಿ ದೇವಸ್ಥಾನ, ಮಾಲ್ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಷರತ್ತು ವಿಧಿಸಿ ತೆರೆಯಲು ಅನುಮತಿ ನೀಡಿರುವ ಸರ್ಕಾರ ಚಿತ್ರರಂಗದ ಚಟುವಟಿಕೆಗಳನ್ನು ಆರಂಭಿಸಲು ಇನ್ನೂ ಏಕೆ ಅನುಮತಿ ನೀಡಿಲ್ಲ ಎಂದು ಸರ್ಕಾರದ ಕ್ರಮವನ್ನು ಸುರೇಶ್ ಪ್ರಶ್ನಿಸಿದ್ದಾರೆ. ಕನ್ನಡ ಚಿತ್ರರಂಗ ಸಹಜ ಸ್ಥಿತಿಗೆ ಬರಲು 3 ತಿಂಗಳಾದರೂ ಬೇಕು. ಜನರು ಚಿತ್ರಮಂದಿರಗಳಿಗೆ ಬರಲು ಭಯ ಪಡುತ್ತಾರೆ. ಸಿನಿಮಾ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ನಾವೂ ಕೂಡಾ ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ,ಸ್ಯಾನಿಟೈಜರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣ ಮಾಡುತ್ತೇವೆ ಎನ್ನುತ್ತಾರೆ ಸುರೇಶ್.
ಧಾರಾವಾಹಿಯಲ್ಲಿ 20 ಜನರು ಕೆಲಸ ಮಾಡಬಹುದು, ಆದರೆ ಸಿನಿಮಾ ಚಿತ್ರೀಕರಣಕ್ಕೆ ಸುಮಾರು 100-200 ಮಂದಿ ಬೇಕೇ ಬೇಕು. ಆದ್ದರಿಂದ ಸರ್ಕಾರ ಸಿನಿಮಾ ಚಟುವಟಿಕೆಗಳನ್ನು ಆರಂಭಿಸಲು ಹಿಂದೇಟು ಹಾಕುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಬಂದ ನಂತರ ಚಿತ್ರರಂಗದ ಚಟುವಟಿಕೆಗಳಿಗೆ ಅನುಮತಿ ದೊರೆಯಬಹುದು. ಒಟ್ಟಿನಲ್ಲಿ ಈ ಎಲ್ಲಾ ಸಮಸ್ಯೆಗಳು ಯಾವಾಗ ಬಗೆಹರಿಯುತ್ತವೆಯೋ ಕಾದು ನೋಡಬೇಕು.