ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕದ ಜಮೀನಿಗೆ ಸಂಬಂಧಪಟ್ಟಂತೆ ಏರ್ಪಟ್ಟಿದ್ದ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಮೈಸೂರಿನಲ್ಲಿ ಅಭಿನವ ಭಾರ್ಗವನ ಭವ್ಯ ಸ್ಮಾರಕ ನಿರ್ಮಾಣದ ದಾರಿ ಸುಗಮವಾಗಿದೆ.
ಪ್ರಾರಂಭದಲ್ಲಿ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಯೋಚಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಇಲ್ಲಿ ಸಾಧ್ಯವಾಗಲಿಲ್ಲ. ನಂತರ ವಿಷ್ಣು ಕುಟುಂಬ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿತ್ತು. ಅದರಂತೆ ಸರ್ಕಾರ ಮೈಸೂರಿನಲ್ಲಿ 6 ಎಕರೆ ಗೋಮಾಳ ಜಮೀನು ನೀಡಿತ್ತು. ಆದರೆ, ಈ ಜಾಗ ತಮ್ಮದೆಂದು ಅಲ್ಲಿಯ ರೈತರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ರೈತರ ನಡುವೆ ನಡೆದ ಕಾನೂನು ಸಮರದಲ್ಲಿ ಸರ್ಕಾರಕ್ಕೆ ಕೊನೆಗೂ ಗೆಲುವು ಸಿಕ್ಕಿದೆ. ಮೈಸೂರಿನ ಗೋಮಾಳದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಮಾಡುವಂತೆ ಹೈಕೋರ್ಟ್ ಅಸ್ತು ಎಂದಿದೆ. ಮುಂದಿನ ವಾರದಿಂದ ಸ್ಮಾರಕ ನಿರ್ಮಾಣದ ಕಾಮಗಾರಿ ಶುರುವಾಗಲಿದೆ ಎಂದು ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಎದುರು ಮಾತಾಡಿರುವ ಅವರು, ಸರ್ಕಾರ 5 ಎಕರೆ 40 ಗುಂಟೆ ಜಾಗ ನೀಡಿದೆ. ಎರಡು ವರ್ಷಗಳ ಅವಧಿಯಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ನಡೆಯಲಿದೆ. ಎರಡೂವರೆ ಎಕರೆ ಜಾಗದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ, ಉಳಿದ ಜಾಗದಲ್ಲಿ ಫಿಲಂ ಸ್ಟುಡಿಯೋ ನಿರ್ಮಾಣವಾಗಲಿದೆ ಎಂದಿದ್ದಾರೆ ಅನಿರುದ್ಧ್.