ಅನಾರೋಗ್ಯದಿಂದ ಬಳಲುತ್ತಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ರಘುನಾಥ್ ಕಾರ್ನಾಡ್ ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ಸಾಹಿತ್ಯ ಲೋಕ, ರಂಗಭೂಮಿ, ಚಿತ್ರರಂಗಕ್ಕೆ ಕಾರ್ನಾಡ್ ಕೊಡುಗೆ ಅಪಾರವಾದದ್ದು.
ಕನ್ನಡ ಚಿತ್ರರಂಗಕ್ಕೆ ಇಬ್ಬರು ದಿಗ್ಗಜ ನಟರನ್ನು ಪರಿಚಯಿಸಿದ ಕೀರ್ತಿ ನಾಟಕ, ಸಿನಿಮಾ, ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಗಿರೀಶ್ ಕಾರ್ನಾಡರಿಗೆ ಸಲ್ಲುತ್ತದೆ. ಒಬ್ಬರು ಸಾಹಸ ಸಿಂಹ ಮತ್ತೊಬ್ಬರು ಕರಾಟೆ ಕಿಂಗ್. ಹೌದು, ಕನ್ನಡ ಚಿತ್ರರಂಗದಲ್ಲಿ ರಾಮಾಚಾರಿಯಾಗಿ ಪ್ರಖ್ಯಾತಿ ಹೊಂದಿದ್ದ, ಸಾಹಸಸಿಂಹ ವಿಷ್ಣುವರ್ಧನ್, 'ನಾಗರಹಾವು' ಸಿನಿಮಾಗೂ ಮೊದಲು ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಿದ್ದರು. ಹಾಗೇ ಕರಾಟೆ ಕಿಂಗ್ ಅವರನ್ನು ಗಿರೀಶ್ ಕಾರ್ನಾಡ್ ಅವರೇ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.
'ವಂಶವೃಕ್ಷ' ಚಿತ್ರದಿಂದ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ವಿಷ್ಣುವರ್ಧನ್
1971ರಲ್ಲಿ ತೆರೆಕಂಡ 'ವಂಶವೃಕ್ಷ' ಸಿನಿಮಾ ಗಿರೀಶ್ ಕಾರ್ನಾಡ್ ಅವರ ಮೊದಲ ನಿರ್ದೇಶನದ ಸಿನಿಮಾ. ವಿಶೇಷವೆಂದರೆ ಈ ಚಿತ್ರದ ಮೂಲಕ ಒಬ್ಬ ಸ್ಫುರದ್ರೂಪಿ ಹುಡುಗನನ್ನು ಗಿರೀಶ್ ಕಾರ್ನಾಡರು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಈ ನಟ ಮುಂದೆ ಒಂದು ದಿಗ್ಗಜ ನಟರಲ್ಲಿ ಒಬ್ಬರಾಗಿ ಉಳಿಯುತ್ತಾರೆ ಅನ್ನೋದು ಸ್ವತಃ ಆ ನಟನಿಗೂ ಗೊತ್ತಿರಲಿಲ್ಲ. ಗಿರೀಶ್ ಕಾರ್ನಾಡರು ವಿಷ್ಣುವರ್ಧನ್ಗೆ ವಂಶವೃಕ್ಷ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದರು ಎನ್ನುವುದೇ ಹೆಮ್ಮೆಯ ವಿಷಯ.
'ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ಶಂಕರ್ನಾಗ್
ಸಾಹಸಸಿಂಹ ವಿಷ್ಣುವರ್ಧನ್ ನಂತರ ಗಿರೀಶ್ ಕಾರ್ನಾಡ್ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಟ್ಯಾಲೆಟೆಂಡ್ ನಟನನ್ನ ಕೊಡುಗೆಯಾಗಿ ನೀಡಿದ್ದಾರೆ. 1978 ರಲ್ಲಿ ಬಿಡುಗಡೆಯಾಗಿದ್ದ 'ಒಂದಾನೊಂದು ಕಾಲದಲ್ಲಿ' ಸಿನಿಮಾ ಮೂಲಕ ಶಂಕರ್ನಾಗ್ ಅವರನ್ನು ಕಾರ್ನಾಡರು ಸಿನಿಮಾಗೆ ಪರಿಚಯಿಸಿದರು. ಅಂದಿನಿಂದ ಶಂಕರ್ನಾಗ್ ಕನ್ನಡ ಚಿತ್ರರಂಗದ ಧ್ರುವತಾರೆಯಾಗಿ ಇಂದಿಗೂ ಜನರ ಮನಸ್ಸಲ್ಲಿ ಅದರಲ್ಲೂ ಆಟೋಚಾಲಕರ ಮನಸ್ಸಲ್ಲಿ ಉಳಿದಿದ್ದಾರೆ. ಕಾರ್ನಾಡರು ನಿರ್ದೇಶಿಸಿದ ಅತ್ಯುತ್ತಮ ಚಿತ್ರಗಳಲ್ಲಿ ಈ ಚಿತ್ರವೂ ಒಂದು. ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಕೂಡಾ ಬಂದಿದೆ.
ಇಂದು ಬಾರದ ಲೋಕಕ್ಕೆ ಗಿರೀಶ್ ಕಾರ್ನಾಡರು ಪ್ರಯಾಣ ಬೆಳೆಸಿದ್ದಾರೆ. ಇದೀಗ ಗಿರೀಶ್ ಕಾರ್ನಾಡರ ಅಗಲಿಕೆಯಿಂದ ಸಾಹಿತ್ಯ ಲೋಕ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.