ಶಿವಮೊಗ್ಗ: ಗರುಡ ಗಮನ ವೃಷಭ ವಾಹನ ಸಿನಿಮಾ ರಾಜ್ಯದೆಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ರಾಜ್ ಬಿ ಶೆಟ್ಟಿ ಇಂದು ಶಿವಮೊಗ್ಗಕ್ಕೆ ಆಗಮಿಸಿ ಚಿತ್ರದ ಯಶಸ್ಸಿಗಾಗಿ ಕಾರಣರಾದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು.
ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಮಾಗಳನ್ನು ಮಾಡಲು ಪ್ರೇರಣೆ ನೀಡಿದ್ದೇ ಶಿವಮೊಗ್ಗ ಜಿಲ್ಲೆ. ನಾನು ಹುಟ್ಟಿದ್ದು ಇಲ್ಲಿನ ಭದ್ರಾವತಿಯಲ್ಲಿ.
ಅಲ್ಲದೇ ಮೂರನೇ ತರಗತಿವರೆಗೂ ಇಲ್ಲಿಯೇ ವ್ಯಾಸಂಗ ಮಾಡಿದ್ದೇನೆ. ಬಳಿಕ ನಮ್ಮ ಕುಟುಂಬ ಮಂಗಳೂರಿಗೆ ವಲಸೆ ಹೋದೆವು. ಹೀಗಾಗಿ, ಜಿಲ್ಲೆಗೂ ಮತ್ತು ನನಗೂ ವಿಶೇಷ ಸಂಬಂಧವಿದೆ ಎಂದರು.
ಗರುಡ ಗಮನ ವೃಷಭ ವಾಹನ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಶಿವಮೊಗ್ಗದಲ್ಲಿ ಸಿನಿಮಾಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ, ಅಭಿಮಾನಿಗಳಿಗೆ ಧನ್ಯವಾದ ಹೇಳಬೇಕು ಎಂದು ಶಿವಮೊಗ್ಗಕ್ಕೆ ಬಂದಿದ್ದೇವೆ ಎಂದರು.
ನಮ್ಮ ಚಿತ್ರತಂಡ ಯಾವಾಗಲೂ ಹೊಸತನವನ್ನು ಹುಡುಕುತ್ತದೆ. ಅದನ್ನು ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ನೀವು ಕಾಣಬಹುದು. ನಿರ್ದೇಶಕನಾಗಿ ಇದು ನನ್ನ ಎರಡನೇ ಸಿನಿಮಾ.
ನಟನಾಗಿ ಒಂದು ಮೊಟ್ಟೆ ಕತೆಯಿಂದ ಹಿಡಿದು ಈವರೆಗೆ 7 ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ನಟನೆಗಿಂತ ನಿರ್ದೇಶನ ನನಗೆ ತೃಪ್ತಿ ತಂದಿದೆ ಎಂದು ರಾಜ್ ಬಿ.ಶೆಟ್ಟಿ ಹೇಳಿದರು.