ನಿರ್ದೇಶಕ ನರೇಶ್ ಕುಮಾರ್, ಅಶ್ವಿನ್ ಕೊಡಂಗೆ, ತ್ರಿಲೋಕ್ ರೆಡ್ಡಿ ಅಲ್ಲದೆ ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಅವರಿಗೆ ದೊಡ್ಡ ಬ್ರೇಕ್ ನೀಡಿದ ಸಿನಿಮಾ 'ಫಸ್ಟ್ ರ್ಯಾಂಕ್ ರಾಜು'. ಪ್ರವೀಣ್ ಛಾಯಾಗ್ರಹಣ, ಗಿರಿ ಮಹೇಶ್ ಅವರ ಸಂಕಲನ ಕೂಡಾ ಸದ್ದು ಮಾಡಿತ್ತು. ನಾಯಕಿಯಾಗಿ ಅಪೂರ್ವ ಗೌಡ ಪ್ರಸಿದ್ಧಿ ಪಡೆದರೆ, ಗುರುನಂದನ್ ಕನ್ನಡ ಚಿತ್ರರಂಗದಲ್ಲಿ ‘ರಾಜು’ ಎಂದು ಖ್ಯಾತಿ ಪಡೆದರು. ನಂತರ ಅವರು ‘ರಾಜು ಕನ್ನಡ ಮೀಡಿಯಂ’ ಸಿನಿಮಾದಿಂದ ಕೂಡಾ ಗೆಲುವು ಸಾಧಿಸಿದರು. ಹಿರಿಯ ನಟರಾದ ಅನಂತ್ನಾಗ್, ಅಚ್ಯುತ್ ಕುಮಾರ್, ಜೈ ಜಗದೀಶ್, ಸುಧಾ ಬೆಳವಾಡಿ ಹಾಗೂ ಇತರರು ಸಿನಿಮಾದಲ್ಲಿ ನಟಿಸಿದ್ದರು.
2015ರ ಸಕ್ಸಸ್ ಪಟ್ಟಿಯಲ್ಲಿ ಸೇರಿದ ‘ಫಸ್ಟ್ ರ್ಯಾಂಕ್ ರಾಜು’ ಸಿನಿಮಾಗೆ '100 ಪರ್ಸೆಂಟ್ ವಿದ್ಯೆ, ಬುದ್ಧಿ 0 ಪರ್ಸೆಂಟ್' ಎಂದು ಉಪ ಶೀರ್ಷಿಕೆ ಇತ್ತು. ಸಿನಿಮಾ 20 ಕೋಟಿ ರೂಪಾಯಿ ವ್ಯವಹಾರ ಮಾಡಿತ್ತು. ಸಿನಿಮಾಗಾಗಿ 3 ಕೋಟಿ ಖರ್ಚು ಮಾಡಿದ್ದ ಡಾಲ್ಫಿನ್ ಸಂಸ್ಥೆ ದೊಡ್ಡ ಯಶಸ್ಸು ಅಲ್ಲದೆ ಜನಪ್ರಿಯತೆ ಕೂಡಾ ಪಡೆಯಿತು. ಇದೀಗ ವಿಷಯ ಏನಪ್ಪಾ ಅಂದ್ರೆ ಬಹುತೇಕ ಕನ್ನಡದ ತಂತ್ರಜ್ಞರು ಮತ್ತು ನಿರ್ಮಾಪಕರು ‘ಫಸ್ಟ್ ರ್ಯಾಂಕ್ ರಾಜು’ ಸಿನಿಮಾವನ್ನು ತೆಲುಗು ಭಾಷೆಯಲ್ಲಿ ಅದೇ ಹೆಸರಲ್ಲಿ ಮಾಡಿದ್ದು, ಇದೇ ಜೂನ್ 21ರಂದು ಬಿಡುಗಡೆ ಆಗುತ್ತಿದೆ. ಪ್ರವೀಣ್ ಬದಲಾಗಿ ಶೇಖರ್ ಚಂದ್ರ ಈ ತೆಲುಗು ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.
ಚೇತನ್ ಮದಿನೇನಿ, ಕಾಶಿಶ್ ವೋಹ್ರಾ, ಪ್ರಕಾಶ್ ರಾಜ್, ಪ್ರಿಯದರ್ಶಿನಿ, ಬ್ರಹ್ಮಾನಂದಮ್, ವೆನ್ನಿಲ ಕಿಶೋರ್, ರಾವ್ ರಮೇಶ್, ನರೇಶ್, ಪೊಸನಿ ಕೃಷ್ಣ ಮುರಳಿ ಹಾಗೂ ಇನ್ನಿತರರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.