ನಟಿ ವಿಜಯಲಕ್ಷ್ಮಿ ಆಗಾಗ ಹಣದ ಸಮಸ್ಯೆ ಇದೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಹಲವು ಬಾರಿ ವಿಡಿಯೋ ಮಾಡಿ ಮನವಿ ಮಾಡಿದ್ದರು. ಇತ್ತೀಚೆಗಷ್ಟೇ ನಟಿ ವಿಜಯಲಕ್ಷ್ಮಿ ತಾಯಿ ವಿಜಯಾ ಸುಂದರಂ ತೀರಿಕೊಂಡಿದ್ದರು. ಆ ಸಂದರ್ಭದಲ್ಲಿ ಜನಸ್ನೇಹಿ ನಿರಾಶ್ರಿತರ ಆಶ್ರಮದ ಟ್ರಸ್ಟಿಯಾಗಿದ್ದ ಯೋಗೇಶ್, ನಟಿ ವಿಜಯಲಕ್ಷ್ಮಿ ತಾಯಿ ಅಂತ್ಯ ಸಂಸ್ಕಾರ ಮಾಡಿದ್ದರು.
ಹಾಗೇ ಕರ್ನಾಟಕದ ಜನತೆಯಲ್ಲಿ ಹಣದ ಸಹಾಯ ಮಾಡುವಂತೆ ಕೇಳಿಕೊಳ್ಳಲಾಗಿತ್ತು. ಆಗ ರಾಜ್ಯದ ಜನತೆಯಿಂದ ಬರೋಬ್ಬರಿ 3 ಲಕ್ಷ 9000 ರೂಪಾಯಿ ಹಣ ಕಲೆಕ್ಟ್ ಆಗಿತ್ತು. ಆಗ ಕಷ್ಟದಲ್ಲಿದ್ದ ವಿಜಯಲಕ್ಷ್ಮಿ ಸಹಾಯಕ್ಕೆ ನಿರ್ಮಾಪಕ ಭಾ ಮಾ ಹರೀಶ್ ಸಹಾಯದಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕರೆದು, ವಿಜಯಲಕ್ಷ್ಮಿಗೆ ಸಾಂತ್ವನ ಹೇಳುವ ಕೆಲಸ ಮಾಡಿದ್ದರು.
ಆಗ ಯೋಗೇಶ್ ವಿಜಯಲಕ್ಷ್ಮಿಗೆ ಕೃತಜ್ಞತೆ ಇಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ವಿಜಯಲಕ್ಷ್ಮಿ ಕೂಡ ಜನಸ್ನೇಹಿ ನಿರಾಶ್ರಿತರ ಆಶ್ರಮದ ಟ್ರಸ್ಟಿ ಯೋಗೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಬೆಳವಣಿಗೆಗಳ ಬಳಿಕ, ಯೋಗೇಶ್ ಸಂಗ್ರಹಿಸಿದ್ದ 3 ಲಕ್ಷ 9000 ಸಾವಿರ ಹಣವನ್ನ ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್, ಉಪಾಧ್ಯಕ್ಷ ಉಮೇಶ್ ಬಣಕಾರ್ ಹಾಗೂ ನಿರ್ಮಾಪಕ ಭಾ ಮಾ ಹರೀಶ್ ಅವರು ನಟಿ ವಿಜಯಲಕ್ಷ್ಮಿಗೆ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ನಿರ್ಮಾಪಕ ಭಾ ಮಾ ಹರೀಶ್ ಮಾತನಾಡಿ, ಮೊದಲು ನೀವು ಸೋಷಿಯಲ್ ಮೀಡಿಯಾಲ್ಲಿ ಮಾತನಾಡೋದನ್ನ ಬಿಡಿ ಅಂತಾ ವಿಜಯಲಕ್ಷ್ಮಿ ಅವರಿಗೆ ಕಿವಿಮಾತು ಹೇಳಿದರು.