ಬಾಲನಟನಾಗಿ ಚಿತ್ರರಂಗಕ್ಕೆ ಬಂದು ಕಿರಿಯ ವಯಸ್ಸಿಗೆ ರಾಷ್ಟ್ರಪ್ರಶಸ್ತಿ ಪಡೆದು, ನಾಯಕನಾಗಿ ಕೂಡಾ ಅಭಿಮಾನಿಗಳನ್ನು ರಂಜಿಸಿದ ಪುನೀತ್ ರಾಜ್ಕುಮಾರ್ ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪುನೀತ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲವಾದರೂ ಅಭಿಮಾನಿಗಳು ಮಾತ್ರ ನಿನ್ನೆಯಿಂದಲೇ ಪ್ರೀತಿಯ ಅಪ್ಪುವಿಗೆ ಬರ್ತ್ಡೇ ಶುಭ ಕೋರುತ್ತಿದ್ದಾರೆ.
1975 ಮಾರ್ಚ್ 17 ರಂದು ಚೆನ್ನೈನಲ್ಲಿ ಜನಿಸಿದ ಪುನೀತ್ ರಾಜ್ಕುಮಾರ್, 6 ತಿಂಗಳ ಮಗುವಾಗಿದ್ದಾಗಲೇ 'ಪ್ರೇಮದ ಕಾಣಿಕೆ' ಚಿತ್ರದಲ್ಲಿ ಕಾಣಿಸಿಕೊಂಡರು. ಕಲಾವಿದರ ಕುಟುಂಬದಲ್ಲಿ ಜನಿಸಿದ ಪುನೀತ್ಗೆ ನಟನೆ ಎಂಬುದು ರಕ್ತದೊಂದಿಗೆ ಬೆರೆತಿತ್ತು ಎಂಬುದು ಸುಳ್ಳಲ್ಲ. ಒಂದು ವರ್ಷದ ಮಗುವಾಗಿದ್ದಾಗ ಪುನೀತ್ 'ಸನಾದಿ ಅಪ್ಪಣ್ಣ' ಚಿತ್ರದಲ್ಲಿ ಕಾಣಿಸಿಕೊಂಡರು. ನಂತರ 3 ವರ್ಷದವರಿರುವಾಗ 'ವಸಂತ ಗೀತ' ಚಿತ್ರದಲ್ಲಿ ಅಪ್ಪು ನಟಿಸಿದರು. ಅಲ್ಲಿಂದ ಭೂಮಿಗೆ ಬಂದ ಭಗವಂತ, ಭಾಗ್ಯವಂತ, ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ, ಎರಡು ನಕ್ಷತ್ರಗಳು ಸಿನಿಮಾದಲ್ಲಿ ನಟಿಸಿದರು. ಉತ್ತಮ ನಟನೆಗಾಗಿ 'ಬೆಟ್ಟದ ಹೂವು' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಹಾಗೂ ಎರಡು ನಕ್ಷತ್ರಗಳು ಚಿತ್ರಕ್ಕೆ ಕರ್ನಾಟಕ ರಾಜ್ಯ ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ ಪುನೀತ್.
1989 ರಲ್ಲಿ ಬಿಡುಗಡೆಯಾದ 'ಪರಶುರಾಮ' ಚಿತ್ರದ ನಂತರ ಸಿನಿಮಾಗಳಿಂದ ದೂರ ಉಳಿದಿದ್ದ ಪುನೀತ್, ಸುಮಾರು 13 ವರ್ಷಗಳ ನಂತರ 'ಅಪ್ಪು' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸುವ ಮೂಲಕ ಮತ್ತೆ ಚಿತ್ರರಂಗಕ್ಕೆ ಬಂದರು. ಚಿತ್ರದಲ್ಲಿ ಪುನೀತ್ ಜೊತೆಯಾಗಿ ರಕ್ಷಿತ ನಟಿಸಿದ್ದರು. ಇದು ಆಕೆಗೆ ಕೂಡಾ ಮೊದಲ ಸಿನಿಮಾ. ಅಭಿ, ಮೌರ್ಯ, ಆಕಾಶ್, ವಂಶಿ, ಜಾಕಿ, ನಿನ್ನಿಂದಲೇ, ಅಂಜನಿಪುತ್ರ ಸೇರಿ ಇದುವರೆಗೂ ಸುಮಾರು 45 ಸಿನಿಮಾಗಳಲ್ಲಿ ಪುನೀತ್ ನಟಿಸಿದ್ದಾರೆ. ಪುನೀತ್ ನಟಿಸಿರುವ 'ಯುವರತ್ನ' ಬಿಡುಗಡೆಯಾಗಬೇಕಿದೆ. ಸದ್ಯಕ್ಕೆ ಅವರು 'ಜೇಮ್ಸ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ.
ಇದನ್ನೂ ಓದಿ: ಆಸ್ಕರ್ 2021: ಅಂತಿಮ ಸುತ್ತಿಗೆ ನಾಮನಿರ್ದೇಶನವಾದ ಸಿನಿಮಾಗಳು ಹಾಗೂ ಕಲಾವಿದರ ಪಟ್ಟಿ
ನಟ ಸಾರ್ವಭೌಮ ಡಾ. ರಾಜ್ಕುಮಾರ್ ಅವರಂಥ ಮಹಾನ್ ವ್ಯಕ್ತಿಯ ಪುತ್ರನಾಗಿದ್ದರೂ ಪುನೀತ್ ರಾಜ್ಕುಮಾರ್ ಮಾತ್ರ ಬಹಳ ಸರಳ ವ್ಯಕ್ತಿತ್ವದವರು. ಆ್ಯಕ್ಟಿಂಗ್ ಮಾತ್ರವಲ್ಲದೆ ವಿಭಿನ್ನ ವರ್ಕೌಟ್ ಹಾಗೂ ಡ್ಯಾನ್ಸ್ ಮೂಲಕವೂ ಅಭಿಮಾನಿಗಳನ್ನು ಸಂಪಾದಿಸಿರುವ ಪುನೀತ್, ತಮ್ಮದೇ ಪಿಆರ್ಕೆ ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಇಂದು 46ನೇ ವಸಂತಕ್ಕೆ ಕಾಲಿಟ್ಟಿರುವ ಪುನೀತ್ಗೆ ಸ್ಯಾಂಡಲ್ವುಡ್ ಸೆಲಬ್ರಿಟಿಗಳು, ಅಭಿಮಾನಿಗಳು ಹಾಗೂ ಸ್ನೇಹಿತರು ಶುಭ ಹಾರೈಸಿದ್ದಾರೆ.