ಬೆಂಗಳೂರು: 'ಟಗರು' ಸಿನಿಮಾ ನಂತರ ನಟ ಧನಂಜಯ್, ಡಾಲಿ ಎಂದೇ ಖ್ಯಾತರಾದರು. ಅಲ್ಲದೆ ಅವರಿಗೆ ಹೆಚ್ಚು ಹೆಚ್ಚು ಅವಕಾಶಗಳು ಹುಡುಕಿ ಬರುತ್ತಿದ್ದು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲವರು ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ವಿಚಾರ ಧನಂಜಯ್ ಗಮನಕ್ಕೆ ಬಂದಿದ್ದು ಜನರು ಎಚ್ಚರವಾಗಿರುವಂತೆ ಧನಂಜಯ್ ಮನವಿ ಮಾಡಿದ್ದಾರೆ.
ಫೇಸ್ಬುಕ್ನಲ್ಲಿ ನಕಲಿ ಖಾತೆಯನ್ನು ತೆರೆದಿರುವ ಕೆಲವರು, ಧನಂಜಯ್ ಫೋಟೋ ಬಳಸಿಕೊಂಡು 'ಸಿನಿಮಾವೊಂದಕ್ಕೆ ಆಡಿಷನ್ ಮಾಡುತ್ತಿದ್ದು ನಟ-ನಟಿಯರು ಬೇಕಾಗಿದ್ದಾರೆ' ಎಂದು ಜಾಹೀರಾತು ನೀಡಿದ್ದಾರೆ. ಇದು ಧನಂಜಯ್ ಗಮನಕ್ಕೆ ಬಂದಿದ್ದು ''ಈಗಾಗಲೇ ಇದೇ ರೀತಿ ಇಂತಹ ನಕಲಿ ಜಾಹೀರಾತುಗಳನ್ನು ನಂಬಿ ಹಲವರು ಮೋಸ ಹೋಗಿದ್ದಾರೆ. ದಯವಿಟ್ಟು ಮುಂದಿನ ದಿನಗಳಲ್ಲಿ ಯಾರೂ ಮೋಸ ಹೋಗಬೇಡಿ. ಇದೆಲ್ಲಾ ಸುಳ್ಳು ಸುದ್ದಿ, ನಾನು ಯಾವ ಆಡಿಷನ್ ಕೂಡಾ ಕರೆದಿಲ್ಲ'' ಎಂದು ತಮ್ಮ ಅಫಿಷಿಯಲ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಧನಂಜಯ್ ಸಿನಿಮಾ ವಿಚಾರಕ್ಕೆ ಬರುವುದಾದರೆ ರತ್ನನ್ ಪರಪಂಚ, ಬಡವ ರಾಸ್ಕಲ್, ಯುವರತ್ನ ,ಡಾಲಿ, ಪುಷ್ಪ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯುವರತ್ನ ಸಿನಿಮಾ ಕೆಲಸಗಳು ಮುಗಿದಿದ್ದು ಕನ್ನಡದೊಂದಿಗೆ ತೆಲುಗು ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ.