ನನ್ನ ತಂದೆ ಮುಮ್ಮಟಿ ಬಹಳ ಹಠಮಾರಿ ಸ್ವಭಾವದವರು. ನನ್ನನ್ನು ಅವರು ಮುದ್ದಾಗಿ ಬೆಳೆಸಲಿಲ್ಲ. ರಿಸ್ಕ್ ತೆಗೆದುಕೊಳ್ಳದಿದ್ದರೆ ಜೀವನದಲ್ಲಿ ಗೆಲುವು ಸಾಧಿಸಲಾಗುವುದಿಲ್ಲ ಎಂಬುದನ್ನು ನನಗೆ ಚಿಕ್ಕಂದಿನಲ್ಲೇ ಕಲಿಸಿದ್ದಾರೆ ಎಂದು ಮಲಯಾಳಂ ಸೂಪರ್ಸ್ಟಾರ್ ಮುಮ್ಮಟಿ ಪುತ್ರ ದುಲ್ಕರ್ ಸಲ್ಮಾನ್ ಹೇಳಿದ್ದಾರೆ.

ಕೆಲವೊಬ್ಬರು ತಮ್ಮ ಮಕ್ಕಳಿಗೆ ರಿಸ್ಕ್ ನೀಡಲು ಇಷ್ಟಪಡುವುದಿಲ್ಲ. ಆದರೆ ನನ್ನ ತಂದೆ ಆ ರೀತಿ ಅಲ್ಲ. ಅವರು ಬಹಳ ಹಠಮಾರಿ. ಅದರಲ್ಲೂ ಸಿನಿಮಾ ವಿಷಯ ಬಂದರೆ ಅವರು ಎಂದಿಗೂ ಸ್ಪೂನ್ ಫೀಡಿಂಗ್ ಇಷ್ಟಪಡುವುದಿಲ್ಲ. ಜೀವನದಲ್ಲಿ ರಿಸ್ಕ್ ಇರಬೇಕು. ಒಮ್ಮೆ ನೀನು ಮಾಡಿದ ತಪ್ಪು ನಿನಗೆ ಎಲ್ಲವನ್ನೂ ಕಲಿಸುತ್ತದೆ ಎಂದು ನನಗೆ ಅಪ್ಪ ಹೇಳಿಕೊಟ್ಟಿದ್ದಾರೆಂದು ದುಲ್ಕರ್ ಹೇಳುತ್ತಾರೆ. ಉಸ್ತಾದ್ ಹೋಟೆಲ್, ಒ ಕಾದಲ್ ಕಣ್ಮಣಿ, ಚಾರ್ಲಿ, ಮಹಾನಟಿಯಂತ ಸೂಪರ್ ಹಿಟ್ ಸಿನಿಮಾಗಳಲ್ಲಿ ದುಲ್ಕರ್ ನಟಿಸಿದ್ದಾರೆ. 'ಕಾರ್ವಾನ್' ಮೂಲಕ ಕಳೆದ ವರ್ಷ ಬಾಲಿವುಡ್ ಸಿನಿಮಾ ಇಂಡಸ್ಟ್ರಿಗೆ ಕೂಡಾ ಕಾಲಿಟ್ಟಿದ್ದಾರೆ ದುಲ್ಕರ್. ಇತ್ತೀಚೆಗೆ ಬಿಡುಗಡೆಯಾದ 'ಜೋಯಾ ಫ್ಯಾಕ್ಟರ್' ಚಿತ್ರದಲ್ಲಿ ಸೋನಂ ಕಪೂರ್ ಜೋಡಿಯಾಗಿ ಕೂಡಾ ನಟಿಸಿದ್ದಾರೆ.

ಮಲಯಾಳಂ, ತಮಿಳು, ತೆಲುಗು, ಬಾಲಿವುಡ್ ಸಿನಿಮಾಗಳಲ್ಲಿ ದುಲ್ಕರ್ ಬ್ಯುಸಿಯಾಗಿದ್ದು ಎಲ್ಲಾ ಭಾಷೆಗಳನ್ನೂ ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಗೆ ಮಲಯಾಳಂ ನನ್ನ ಮಾತೃಭಾಷೆ. ಇನ್ನು ಹಿಂದಿ ನನ್ನ ಎರಡನೇ ಭಾಷೆ. ನಾನು ಬೆಳೆದದ್ದು ಚೆನ್ನೈನಲ್ಲಾದ್ದರಿಂದ ತಮಿಳು ಕೂಡಾ ಬರುತ್ತದೆ. ಇನ್ನು ಬೇರೆ ಭಾಷೆಗಳನ್ನು ಕಲಿಯುತ್ತಿದ್ದೇನೆ ಎಂದು ಉತ್ತರಿಸುತ್ತಾರೆ ದುಲ್ಕರ್. ನಟ ಮಾತ್ರವಲ್ಲ ಗಾಯಕರಾಗಿಯೂ ದುಲ್ಕರ್ ತಮ್ಮನ್ನು ಗುರುತಿಸಿಕೊಂಡಿದ್ದಾರೆ.