ಆ ದಿನಗಳು, ಸ್ಲಂಬಾಲ, ಎದೆಗಾರಿಕೆ ಅಂತಹ ಸಿನಿಮಾಗಳ ಕಥೆಗಳ ರೂವಾರಿ ಹಾಗೂ ಪತ್ರಕರ್ತ ಅಗ್ನಿ ಶ್ರೀಧರ್ ನಾಲ್ಕು ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ.
ಶೂಟೌಟ್ ಪ್ರಕರಣದಿಂದಾಗಿ ಚಿತ್ರರಂಗದಿಂದ ದೂರ ಉಳಿದಿದ್ದ ಅವರು, ಮತ್ತೊಂದು ರೋಚಕ ರೌಡಿಸಂ ಹಿನ್ನೆಲೆಯುಳ್ಳ ಕಥೆಯನ್ನ ಸಿನಿಮಾ ಮಾಡುವ ಮೂಲಕ ತಮ್ಮ ಹೊಸ ಸಿನಿಮಾವನ್ನು ಘೋಷಿಸಿದ್ರು. ಅದು 70ರ ದಶಕದಲ್ಲಿ ಬೆಂಗಳೂರು ಮಾಜಿ ಭೂಗತ ದೊರೆ ಆಗಿ ಮೆರೆದ ಎಂ.ಪಿ.ಜಯರಾಜ್ ಬಯೋಗ್ರಫಿ. ಅದನ್ನು ಅಗ್ನಿ ಶ್ರೀಧರ್ ತೆರೆ ಮೇಲೆ ತರೋದಿಕ್ಕೆ ಹೊರಟ್ಟಿದ್ದಾರೆ.
ಅಚ್ಚರಿ ವಿಷಯ ಅಂದರೆ, ಬ್ಯಾಕ್ ಟು ಬ್ಯಾಕ್ ವಿಭಿನ್ನ ಸಿನಿಮಾಗಳಲ್ಲಿ ನಟಿಸುತ್ತಿರುವ ಡಾಲಿ ಧನಂಜಯ್, ಜಯರಾಜ್ ಪಾತ್ರದಲ್ಲಿ ತೆರೆ ಮೇಲೆ ಮಿಂಚಲಿದ್ದಾರೆ. ಅಗ್ನಿ ಶ್ರೀಧರ್ ಕಥೆ ಬರೆದಿದ್ದು, ಅವನೇ ಶ್ರೀಮನ್ನಾರಾಯಣ, ಅವತಾರ ಪುರುಷ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಶೂನ್ಯ ಎಂಬ ಯುವ ನಿರ್ದೇಶಕ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಗ್ನಿ ಶ್ರೀಧರ್ ಹೇಳುವಂತೆ 70ರ ದಶಕದ ಭಾವನೆ ನೀಡುವ ಕಾರಣಕ್ಕಾಗಿ ರಿಯಲ್ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಂತೆ. ಎಂ.ಪಿ.ಜಯರಾಜ್ಗೆ ತುಂಬಾ ಹತ್ತಿರ ವ್ಯಕ್ತಿಯಾಗಿದ್ದ ಅಗ್ನಿ ಶ್ರೀಧರ್, ಅವರ ಬಗ್ಗೆ ಪಾಸಿಟಿವ್, ನೆಗೆಟಿವ್ ವಿಷಯಗಳನ್ನು ಹೇಳಲಿದ್ದಾರೆ.
ಧನಂಜಯ್ ಈ ಜಯರಾಜ್ ಪಾತ್ರಕ್ಕೆ ಜೀವ ತುಂಬಲು ಕಾತುರದಿಂದ ಕಾಯುತ್ತಿದ್ದಾರೆ. ಅಳಿದು-ಉಳಿದವರು ಸಿನಿಮಾ ನಿರ್ಮಾಪಕ ಅಶು ಬೆದ್ರೆ ಅವರು ಈ ಸಿನಿಮಾಕ್ಕೆ ಬಂಡವಾಳ ಹಾಕುತ್ತಿದ್ದಾರೆ. ವೀಣಾ ಅಪೂರ್ವ ಈ ಸಿನಿಮಾದ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಜಯರಾಜ್ ಮಗ ಅಜಿತ್ ಜಯರಾಜ್ ಕೂಡ ಈ ಸಿನಿಮಾದಲ್ಲಿ ಒಂದು ಪಾತ್ರ ಮಾಡಲಿದ್ದಾರೆ. ಜಯರಾಜ್ ಪಾತ್ರಕ್ಕೆ ಧನಂಜಯ್ ಮಾತ್ರ ಫೈನಲ್ ಆಗಿದ್ದು, ಉಳಿದ ಪಾತ್ರಗಳು, ಚಿತ್ರದ ಟೈಟಲ್ ಏನು? ಅನ್ನೋದು ಸದ್ಯದಲ್ಲೇ ಚಿತ್ರತಂಡ ತಿಳಿಸಲಿದೆ. ಬಹುಶಃ ಜೂನ್ ತಿಂಗಳು ಎಂ.ಪಿ.ಜಯರಾಜ್ ಬಯೋಪಿಕ್ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.