ರಾಕಿಂಗ್ ಸ್ಟಾರ್ ಯಶ್ ಜೊತೆ ನಾನು ಖಂಡಿತ ಒಂದು ಸಿನಿಮಾ ಮಾಡುತ್ತೇನೆ ಎಂದು ನಿರ್ದೇಶಕ ಎ.ಪಿ. ಅರ್ಜುನ್ ತಿಳಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ಗಾಗಿ 'ಕಿಸ್' ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಿದ್ದ ವೇಳೆ ಮಾಧ್ಯಮಗಳ ಜೊತೆ ನಿರ್ದೇಶಕ ಅರ್ಜುನ್ ಮಾತನಾಡಿದರು.
ಮುಂದಿನ ದಿನಗಳಲ್ಲಿ ನಾನು ಯಶ್ ಚಿತ್ರಕ್ಕೆ ನಿರ್ದೇಶನ ಮಾಡುತ್ತೇನೆ. ಇದಕ್ಕಾಗಿ ಎಲ್ಲ ತಯಾರಿ ನಡೆದಿದ್ದು, ಮಾತುಕತೆ ಕೂಡಾ ನಡೆದಿದೆ. ಯಶ್ ಈಗ ನ್ಯಾಷನಲ್ ಸ್ಟಾರ್. ಅವರ ಮ್ಯಾನರಿಸಂಗೆ ತಕ್ಕಂತೆ ಕಥೆ ರೆಡಿ ಮಾಡಬೇಕು. ಆದರೆ ಖಂಡಿತ ಇನ್ನು 2 ವರ್ಷಗಳಲ್ಲಿ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತೇವೆ ಎಂದು ಅವರು ಹೇಳಿದರು. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡಬೇಕು ಎಂದು ಬಹಳಷ್ಟು ಸಾರಿ ಅಂದುಕೊಂಡಿದ್ದೆವು. ಆದರೆ, ಅದಕ್ಕೆ ಸಮಯ ಕೂಡಿ ಬಂದಿರಲಿಲ್ಲ. ಮುಂದಿನ ದಿನಗಳಲ್ಲಿ ಖಂಡಿತ ಸಿನಿಮಾ ಮಾಡುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು. ನಿರ್ದೇಶಕ ಎ.ಪಿ. ಅರ್ಜುನ್ ಅದ್ದೂರಿ, ಅಂಬಾರಿ, ರಾಟೆ, ಐರಾವತ ಹಾಗೂ ಕಿಸ್ ಚಿತ್ರಗಳ ನಿರ್ದೇಶನ ಮಾಡಿದ್ದು, ಯಶ್ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದಾರೆ. ಯಶ್ ಮೈಸೂರಿನವರಾದರೆ, ಅರ್ಜುನ್ ಮಂಡ್ಯಕ್ಕೆ ಸೇರಿದವರು. ಅರ್ಜುನ್ ಹೇಳಿದಂತೆ ಮುಂದೆ ಇವರಿಬ್ಬರ ಕಾಂಬಿನೇಷನ್ನಲ್ಲಿ ಸಿನಿಮಾ ಬಂದರೆ ಆಶ್ಚರ್ಯ ಪಡಬೇಕಿಲ್ಲ.
![arjun, yash](https://etvbharatimages.akamaized.net/etvbharat/prod-images/4758932_ayshar.jpg)