ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ಈ ಬಾರಿ ಕೊರೊನಾ ಹಾಗೂ ಅದಕ್ಕಿಂತ ಮುಖ್ಯವಾಗಿ ಅಣ್ಣ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಿಂದ ಧ್ರುವ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಈ ಬಾರಿ ಹುಟ್ಟುಹಬ್ಬ ಆಚರಣೆ ಬೇಡ ಎಂದು ಧ್ರುವ ನಿನ್ನೆ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದರು.
ಧ್ರುವ ಸರ್ಜಾ 6 ಅಕ್ಟೋಬರ್ 1988 ರಂದು ವಿಜಯ್ ಕುಮಾರ್ ಹಾಗೂ ಅಮ್ಮಣ್ಣಿ ದಂಪತಿ ಎರಡನೇ ಪುತ್ರನಾಗಿ ಬೆಂಗಳೂರಿನಲ್ಲಿ ಜನಿಸಿದರು. ಧ್ರುವ ಸರ್ಜಾ ತಾತ ಶಕ್ತಿ ಪ್ರಸಾದ್ ಕನ್ನಡ ಚಿತ್ರರಂಗದ ಖ್ಯಾತ ನಟರು. ಇವರು ಸೋದರ ಮಾವ ಅರ್ಜುನ್ ಸರ್ಜಾ ಕೂಡಾ ದಕ್ಷಿಣ ಭಾರತದ ಹೆಸರಾಂತ ನಟ. ಮತ್ತೊಬ್ಬ ಮಾವ ಕಿಶೋರ್ ಸರ್ಜಾ, ಅಣ್ಣ ಚಿರಂಜೀವಿ ಸರ್ಜಾ, ಅತ್ತಿಗೆ ಮೇಘನಾ ಸರ್ಜಾ ಎಲ್ಲರೂ ಕಲಾವಿದರು. ಹೀಗೆ ಕಲಾವಿದರ ಕುಟುಂಬದಿಂದ ಬಂದ ಧ್ರುವ ಸರ್ಜಾ ಅದ್ಧೂರಿ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದರು. ಮೊದಲ ಚಿತ್ರದಲ್ಲೇ ಧ್ರುವಾಗೆ ಒಳ್ಳೆ ಪ್ರಶಂಸೆ ದೊರೆಯಿತು. ನಂತರ ಬಹದ್ದೂರ್, ಭರ್ಜರಿ, ಪ್ರೇಮ ಬರಹ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಧ್ರುವ ಸದ್ಯಕ್ಕೆ ಪೊಗರು ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.
ಧ್ರುವ ಸರ್ಜಾ ನಟಿಸಿರುವುದು 5 ಚಿತ್ರಗಳಲ್ಲಾದರೂ ಅವರು ಅತಿ ಕಡಿಮೆ ಸಮಯದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದಕ್ಕೆ ಕಾರಣ ಅವರ ಸರಳತೆ, ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುವ ಅವರ ಗುಣ. ಧ್ರುವ ಸರ್ಜಾ ಮಾತ್ರವಲ್ಲದೆ ಚಿರಂಜೀವಿ ಸರ್ಜಾ, ಅರ್ಜುನ್ ಸರ್ಜಾ ಯಾರೇ ಆಗಲಿ ತಾವು ಸ್ಟಾರ್ ಕುಟುಂಬದಿಂದ ಬಂದವರು ಎಂಬುದನ್ನು ಯೋಚಿಸದೆ ಅಭಿಮಾನಿಗಳನ್ನು ಸ್ನೇಹಿತರಂತೆ ಕಾಣುವ ದೊಡ್ಡ ಗುಣ ಅವರು ಇಷ್ಟು ಜನರ ಪ್ರೀತಿ ಗಳಿಸಲು ಕಾರಣ.
ಜೂನ್ 7 ಧ್ರುವ ಸರ್ಜಾ ಪ್ರೀತಿಯ ಅಣ್ಣ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡರು. ಅದೇ ನೋವಿನಲ್ಲಿ ಈ ಭಾನುವಾರ ಅತ್ತಿಗೆ ಮೇಘನಾ ರಾಜ್ ಸೀಮಂತ ಕಾರ್ಯವನ್ನು ಮುಗಿಸಿದರು. ನಿನ್ನೆ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ ಧ್ರುವ ಸರ್ಜಾ "ಅಭಿಮಾನಿಗಳೇ ನಮ್ಮ ಅನ್ನದಾತರು, ನೀವೇ ನಮ್ಮ ಶಕ್ತಿ, ಪ್ರತಿವರ್ಷ ಹುಟ್ಟುಹಬ್ಬಕ್ಕೆ ನೀವು ನಮ್ಮ ಮನೆಗೆ ಬಂದು ತೋರಿಸೋ ಪ್ರೀತಿ, ಅಭಿಮಾನಿ ವರ್ಣನಾತೀತ. ಈ ವರ್ಷ ಎಲ್ಲಾ ಬೆಳವಣಿಗೆಗಳು ನಿಮಗೆ ಗೊತ್ತಿರೋದೇ, ಎಲ್ಲೂ ಸಂಭ್ರಮವಿಲ್ಲ. ಅಭಿಮಾನಿಗಳನ್ನು ಮನೆಯ ಬಳಿ ಬರಬೇಡಿ ಎನ್ನಲು ಮನಸಿಲ್ಲ. ನೀವು ಇರುವ ಕಡೆಯಿಂದಲೇ ಹಾರೈಸಿ. ಅದೇ ನನಗೆ ಶ್ರೀ ರಕ್ಷೆ, ಜೈ ಆಂಜನೇಯ" ಎಂದು ಬರೆದುಕೊಂಡಿದ್ದರು.
ಅಭಿಮಾನಿಗಳು ಧ್ರುವ ಮನೆ ಬಳಿ ತೆರಳಿ ಅವರಿಗೆ ಶುಭ ಕೋರದಿದ್ದರೂ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ತಾವು ಇರುವಲ್ಲಿಯೇ ಆಚರಿಸುವ ಮೂಲಕ ಧ್ರುವ ಹುಟ್ಟುಹಬ್ಬದ ಶುಭ ಕೋರಿದ್ದಾರೆ.