ಧನ್ಯಾ ಬಾಲಕೃಷ್ಣ ಎನ್ನುವ ಕನ್ನಡತಿಗೆ ಬೇರೆ ಚಿತ್ರರಂಗಗಳಲ್ಲಿ ಇರುವ ಅದೃಷ್ಟ ಮತ್ತು ಅವಕಾಶಗಳು ಕನ್ನಡ ಚಿತ್ರರಂಗದ ವಿಷಯದಲ್ಲಿ ಮಾತ್ರ ಇಲ್ಲ ಎಂದರೆ ತಪ್ಪಿಲ್ಲ. ಧನ್ಯಾ ಕನ್ನಡತಿಯೇ ಆದರೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ತಮಿಳು ಚಿತ್ರಗಳಿಂದ.
ತಮಿಳು, ತೆಲುಗು ಮತ್ತು ಮಲಯಾಳಂನ ಕೆಲವು ಚಿತ್ರಗಳಲ್ಲಿ ನಟಿಸಿದರೂ ಒಂದಿಷ್ಟು ಯಶಸ್ಸು ಮತ್ತು ಜನಪ್ರಿಯತೆ ಸಿಕ್ಕರೂ ಅದ್ಯಾಕೋ ಕನ್ನಡ ಚಿತ್ರದಲ್ಲಿ ನಟಿಸುವ ಅವಕಾಶ ಮಾತ್ರ ಸಿಕ್ಕಿರಲಿಲ್ಲ. ಅಂಥದ್ದೊಂದು ಅವಕಾಶ ಆಕೆಗೆ ಸಿಕ್ಕಿದ್ದು `ಸಾರ್ವಜನಿಕರಿಗೆ ಸುವರ್ಣಾವಕಾಶ' ಎಂಬ ಚಿತ್ರದಿಂದ.
ರಿಷಿ ಅಭಿನಯದ ಈ ಚಿತ್ರ ಕಳೆದ ವರ್ಷ ಬಿಡುಗಡೆಯಾದರೂ ಹೆಚ್ಚು ಸುದ್ದಿಯಾಗಲಿಲ್ಲ. ನಂತರ ಧನ್ಯಾಗೆ ದೊಡ್ಡ ಮಟ್ಟದಲ್ಲಿ ಅವಕಾಶಗಳ ಬಾಗಿಲುಗಳೂ ತೆರೆಯಲಿಲ್ಲ. ಮುಂದೇನು ಎನ್ನುವಾಗಲೇ ಧನ್ಯಾಗೆ ಇನ್ನೊಂದು ಸುವರ್ಣಾವಕಾಶ ಸಿಕ್ಕಿದೆ. ಕೋಮಲ್ ಅಭಿನಯದ ಹೊಸ ಚಿತ್ರವೊಂದರಲ್ಲಿ ಅಭಿನಯಿಸುವ ಅವಕಾಶ ಧನ್ಯಾ ಪಾಲಾಗಿದೆ.
ಕ್ರಿಸ್ಟಲ್ ಪಾರ್ಕ್ ಸಿನಿಮಾಸ್‍ನ ಚಂದ್ರಶೇಖರ್ ನಿರ್ಮಾಣದಲ್ಲಿ ಕೋಮಲ್ ಒಂದು ಕಾಮಿಡಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ಹಳೆಯ ಸುದ್ದಿ. ಸಂಭಾಷಣೆಕಾರ ಕೆ.ಎಲ್.ರಾಜಶೇಖರ್ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಕೋಮಲ್ ಕೆಲವು ವರ್ಷಗಳ ನಂತರ ಮತ್ತೊಮ್ಮೆ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
2020' ಎಂದು ಹೆಸರಿಡಲಾಗಿರುವ ಈ ಚಿತ್ರದಲ್ಲಿ ಕೋಮಲ್ ಜೊತೆ ಧನ್ಯಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ ಕುರಿ ಪ್ರತಾಪ್, ತಬಲಾ ನಾಣಿ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ ಮುಂತಾದವರು ನಟಿಸುತ್ತಿರುವ ಈ ಚಿತ್ರದ ಮೋಷನ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.