ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಒಡೆಯ' ಸಿನಿಮಾ ಇದೇ ತಿಂಗಳ 12ರಂದು ರಾಜ್ಯಾದ್ಯಂತ ಸುಮಾರು 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ವಿಷಯ ತಿಳಿಸಲು ನಿನ್ನೆ 'ಒಡೆಯ' ಚಿತ್ರತಂಡ ಸುದ್ದಿಗೋಷ್ಠಿ ಏರ್ಪಡಿಸಿತ್ತು. ಈ ವೇಳೆ ಚಿತ್ರದ ಮೂರು ಹಾಡುಗಳು ಹಾಗೂ ಟ್ರೇಲರನ್ನು ಕೂಡಾ ಬಿಡುಗಡೆ ಮಾಡಲಾಯಿತು.
ನಂತರ ತಮ್ಮ ಬಲಗೈ ಮರು ಶಸ್ತ್ರಚಿಕಿತ್ಸೆ ಬಗ್ಗೆ ಮಾತನಾಡಿದ ದರ್ಶನ್, ಕಳೆದ ವರ್ಷ ಕಾರು ಅಪಘಾತವಾಗಿದ್ದ ವೇಳೆ ಬಲಗೈಗೆ ಶಸ್ತ್ರಚಿಕಿತ್ಸೆ ಮಾಡಿ ಪುಟ್ಟ ರಾಡ್ ಅಳವಡಿಸಲಾಗಿತ್ತು. ಇದೀಗ ಆ ರಾಡನ್ನು ಮತ್ತೆ ಚಿಕಿತ್ಸೆ ಮಾಡಿ ಹೊರ ತೆಗೆಯಬೇಕಿದೆ. ರಾಡ್ ತೆಗೆದ ನಂತರ ಮತ್ತೆ ಮೂರು ತಿಂಗಳು ರೆಸ್ಟ್ ಮಾಡಬೇಕು. ವೈದರು ಈ ಬಗ್ಗೆ ನನಗೆ ಒಂದು ವರ್ಷದಿಂದ ಕೇಳುತ್ತಿದ್ದಾರೆ. ಅಪಘಾತ ಆದ ಕೆಲವು ದಿನಗಳ ನಂತರ ನಾನು ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದು ವೈದ್ಯರಿಗೆ ಇಷ್ಟ ಆಗಿಲ್ಲ. ಸಾಹಸ ಸನ್ನಿವೇಶಗಳಲ್ಲಿ ಪಾಲ್ಗೊಂಡಾಗ ಕೈ ಮರಗಟ್ಟಿದ ಹಾಗೆ ಆಗುತ್ತಿತ್ತು. ನಿರ್ಮಾಪಕ ಹಾಗೂ ಚಿತ್ರತಂಡದ ಪರಿಸ್ಥಿತಿ ಬಗ್ಗೆ ಯೋಚಿಸಿ ನಾನು ಚಿತ್ರೀಕರಣದಲ್ಲಿ ಪಾಲ್ಗೊಂಡೆ. ಈಗ ಮತ್ತೆ ರೆಸ್ಟ್ ಮಾಡಬೇಕು. ಶೂಟಿಂಗ್ಗೆ ಹೋಗಬಾರದು ಎಂದರೆ ಸ್ವಲ್ಪ ಕಷ್ಟವೇ ಎಂದರು.
ಇನ್ನು ಡಿಸೆಂಬರ್ 6ರಂದು 'ಗಂಡುಗಲಿ ಮದಕರಿ ನಾಯಕ' ಸಿನಿಮಾ ಸೆಟ್ಟೇರುತ್ತಿದೆ. ಒಡೆಯ ತಮಿಳಿನ ರೀಮೇಕ್ ನಿಜ. ಆದರೆ ನಾವು ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇವೆ. ತಮಿಳು ಚಿತ್ರ 3:15 ನಿಮಿಷ ಅವಧಿ ಇತ್ತು. ಕನ್ನಡಕ್ಕೆ ತರುವಾಗ ನಮ್ಮ ಸಂಸ್ಕೃತಿಗೆ ಒಗ್ಗಿಸಿಕೊಂಡು 2:40 ನಿಮಿಷಕ್ಕೆ ಸಿದ್ಧ ಮಾಡಿದ್ದೇವೆ. ನನಗೆ ಇಲ್ಲಿ ಎರಡು ಶೇಡ್ ಇರುವ ಪಾತ್ರ ಇದೆ. ಇಡೀ ಕುಟುಂಬಕ್ಕೆ ಇದೊಂದು ಪಕ್ಕಾ ಮನರಂಜನೆ ನೀಡುವ ಸಿನಿಮಾ ಎಂದು ದರ್ಶನ್ ಹೇಳಿದರು.