ಬೆಂಗಳೂರು: ನಟ ರಾಮ್ ಕುಮಾರ್ ಪುತ್ರ ಧೀರನ್ ರಾಮ್ ಕುಮಾರ್ ಅಭಿನಯದ ‘ದಾರಿ ತಪ್ಪಿದ ಮಗ’ ಸಿನಿಮಾದ ಶೀರ್ಷಿಕೆಯನ್ನು ಶಿವ 143 ಎಂದು ಬದಲಾವಣೆ ಮಾಡಲಾಗಿದೆ. ಈ ಮೊದಲು ದಾರಿ ತಪ್ಪಿದ ಮಗ ಎಂಬ ಶೀರ್ಷಿಕೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಹೆಸರನ್ನು ಬದಲಾಯಿಸಲಾಗಿದೆ.
ಡಾ. ರಾಜ್ಕುಮಾರ್ ಅಭಿನಯದಲ್ಲಿ ಈ ಹಿಂದೆ ದಾರಿ ತಪ್ಪಿದ ಮಗ ಎಂಬ ಶೀರ್ಷಿಕೆಯಲ್ಲಿ ಸಿನಿಮಾ ಬಂದಿತ್ತು. ಹಾಗಾಗಿ ಮೇರು ನಟನೊಬ್ಬನ ಸಿನಿಮಾ ಶೀರ್ಷಿಕೆಯನ್ನು ಲಾಭಕ್ಕಾಗಿ ಬಳಸಿಕೊಳ್ಳಬಾರದು. ಮತ್ತು ಆ ಸಿನಿಮಾಗೆ ಧಕ್ಕೆ ಆಗಬಾರದು. ಅಲ್ಲದೆ ರಾಜ್ ಅಭಿಮಾನಿಗಳು ಶೀರ್ಷಿಕೆಗೆ ಸಾಕಷ್ಟು ವಿರೊಧ ವ್ಯಕ್ತಪಡಿಸಿದ್ದರಿಂದ ಸಿನಿಮಾ ಶೀರ್ಷಿಕೆ ಬದಲಾಯಿಸಿ "ಶಿವ 143" ಎಂದು ಮರು ನಾಮಕರಣ ಮಾಡಲಾಗಿದೆ.
ಮರು ನಾಮಕರಣವಾಗಿರುವ ಶಿವ ಕೂಡ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ಸಿನಿಮಾ ಆಗಿದೆ. ಡಾ. ಶಿವರಾಜ್ಕುಮಾರ್ ಅವರ ಹೆಸರು ಸಹ ಆಗುತ್ತದೆ. 143 ಅನ್ನು ಐ ಲವ್ ಯು ಸಂಕೇತವಾಗಿ ಬಳಸಲಾಗಿದೆ. ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.