ಬೆಂಗಳೂರು : ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಕೊನೆಗೂ ಒಳ್ಳೆ ಕಾಲ ಕೂಡಿ ಬಂದಿದೆ.
ಮೈಸೂರಿನ ಉದ್ಬೂರಿನ ಹಾಳಾಲು ಗ್ರಾಮದಲ್ಲಿ ಸ್ಮಾರಕ ನಿರ್ಮಾಣಕ್ಕೆ ಈಗಾಗಲೇ ಗುದ್ದಲಿ ಪೂಜೆ ಮಾಡಲಾಗಿದೆ. ಬೆಂಗಳೂರಿನಲ್ಲಿರೋ ಸ್ಮಾರಕ ಮೈಸೂರಿನಲ್ಲಿ ನಿರ್ಮಾಣ ಆಗಬೇಕು ಎಂಬುದು ಭಾರತಿ ವಿಷ್ಣುವರ್ಧನ್ ಜೊತೆಗೆ ಸಾಹಸ ಸಿಂಹನ ಆಸೆಯಾಗಿತ್ತು.
ಈಗ ಸರ್ಕಾರ ಮೈಸೂರಿನ ಉದ್ಬೂರಿನ ಹಾಳಾಲು ಗ್ರಾಮದಲ್ಲಿ ಐದು ಎಕರೆ ಜಮೀನು ನೀಡಿದೆ. ಈಗ ಜಮೀನಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರವಾಗಿ ಇಂದು ಗೃಹ ಕಚೇರಿ ಕೃಷ್ಣದಲ್ಲಿ ಭಾರತಿ ವಿಷ್ಣುವರ್ಧನ್ ಹಾಗೂ ಅಳಿಯ ಅನಿರುದ್ದ್ ಸಿಎಂ ಯಡಿಯೂರಪ್ಪರನ್ನ ಭೇಟಿ ಮಾಡಿದರು. ಇದೇ ತಿಂಗಳ 15ಕ್ಕೆ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಬೇಕು ಅಂತಾ ಹೇಳಿಕೊಂಡಿದ್ದಾರೆ.
ಕೊರೊನಾ ಇರುವ ಕಾರಣ ಸಿಎಂ ಕೂಡ ಆನ್‌ಲೈನ್ ಮೂಲಕ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ. ಮತ್ತೊಂದೆಡೆ ಸೆಪ್ಟೆಂಬರ್ 18ಕ್ಕೆ ವಿಷ್ಣುವರ್ಧನ್ ಅವರ 11ನೇ ವರ್ಷದ ಪುಣ್ಯಸ್ಮರಣೆ. ಈ ಕಾರ್ಯಕ್ರಮ ಆದರೆ ಸಂತೋಷ ಆಗುತ್ತೆ ಅಂತಾ ಭಾರತಿ ವಿಷ್ಣುವರ್ಧನ್ ಹೇಳಿದರು. ಚಿತ್ರರಂಗದಲ್ಲಿನ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಭಾರತಿ ವಿಷ್ಣುವರ್ಧನ್ ನನಗೆ ಗೊತ್ತಿಲ್ಲದ ವಿಷ್ಯದ ಬಗ್ಗೆ ನಾನು ಮಾತನಾಡೋದಿಲ್ಲ ಎಂದರು.