ಕಿರಿಯ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಆಕ್ಷನ್ ಹೀರೋ, ಯುವ ಸಾಮ್ರಾಟ್ ಚಿರಂಜೀವಿ ವಿಜಯಕುಮಾರ್ (ಸರ್ಜಾ ಫ್ಯಾಮಿಲಿ ನೇಮ್) ದೊಡ್ಡ ಸೋದರಮಾವ ಕಿಶೋರ್ ಸರ್ಜಾ ನಿರ್ದೇಶನದ ವಾಯುಪುತ್ರ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು. ಸರ್ಜಾ ಕುಟುಂಬ ಆಂಜನೇಯನ ಭಕ್ತರಾಗಿರುವುದು ಈ ಚಿತ್ರಕ್ಕೆ ‘ವಾಯುಪುತ್ರ’ ಎಂದು ನಾಮಕರಣ ಮಾಡಲು ಕಾರಣ. ತಮಿಳು ಸೂಪರ್ ಸ್ಟಾರ್ ಅರ್ಜುನ್ ಸರ್ಜಾ ತಮಿಳಿನ ಸಂಡೇಕೋಳಿ ಚಿತ್ರದ ರಿಮೇಕ್ ವಾಯುಪುತ್ರದ ಮೂಲಕ ಚಿರಂಜೀವಿ ಸರ್ಜಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿ ಆ ಚಿತ್ರದ ನಿರ್ಮಾಣ ಸಹ ಮಾಡಿದ್ದರು.
ದುರಾದೃಷ್ಟವೆಂದರೆ ವಾಯುಪುತ್ರ ಸಿನಿಮಾದ ಡಬ್ಬಿಂಗ್ ಸಮಯ 2009 ಜೂನ್ 29 ರಂದು ಕಿಶೋರ್ ಸರ್ಜಾ ನಿಧನ ಹೊಂದಿದ್ದರು. ಅಣ್ಣನ ಅಗಲುವಿಕೆಯ ಮಡುವಿನಲ್ಲಿ ಚಿತ್ರೀಕರಣ ಸಂಪೂರ್ಣಗೊಂಡಿದ್ದ ಚಿತ್ರದ ಮಿಕ್ಕ ಕೆಲಸವನ್ನು ಅರ್ಜುನ್ ಸರ್ಜಾ ವಹಿಸಿಕೊಂಡಿದ್ದರು.
ಈಗ ಅದೇ ಜೂನ್ ತಿಂಗಳ ಮೊದಲ ವಾರದಲ್ಲಿ ದೊಡ್ಡ ಸೋದರಮಾವ ಕಿಶೋರ್ ಸರ್ಜಾ ನಿಧನ ಹೊಂದಿದ 11 ವರ್ಷದ ಬಳಿಕ ಚಿರಂಜೀವಿ ಸರ್ಜಾ ಕೂಡ ಅಗಲಿದ್ದಾರೆ. ಅಂದು ಕಿಶೋರ್ ಸರ್ಜಾ ಅವರ ಅಂತ್ಯ ಕ್ರಿಯೆ ಸೋಮವಾರ ನಡೆಸಲಾಗಿತ್ತು. ಇಂದು ಚಿರಂಜೀವಿ ಸರ್ಜಾ ಅವರ ಅಂತ್ಯ ಕ್ರಿಯೆ ಸಹ ಸೋಮವಾರವೇ ನಡೆಯಲಿದೆ. ಕಿಶೋರ್ ಸರ್ಜಾ ಅಂತ್ಯ ಕ್ರಿಯೆ ಅವರ ತಂದೆ ಹಿರಿಯ ನಟ ಶಕ್ತಿ ಪ್ರಸಾದ್ ಸಮಾದಿ ಇರುವ ಜಕ್ಕೇನಹಳ್ಳಿ, ಮಧುಗಿರಿ ತಾಲೂಕಿನ ಅರ್ಜುನ್ ಸರ್ಜಾ ಅವರ ಫಾರ್ಮ್ ಹೌಸ್ನಲ್ಲಿ ನಡೆದಿತ್ತು. ಇಂದು ಚಿರು ಅಂತ್ಯಕ್ರಿಯೆ ಕನಕಪುರ ರಸ್ತೆಯ ಧ್ರುವ ಸರ್ಜಾ ಫಾರ್ಮ್ ಹೌಸ್ನಲ್ಲಿ ನಡೆಯಲಿದೆ. ಅಂದು 2009 ಅಣ್ಣನನ್ನು ಸಹೋದರ ಅರ್ಜುನ್ ಸರ್ಜಾ ತನ್ನ ಫಾರ್ಮ್ ಹೌಸ್ನಲ್ಲಿ ತಂದೆಯ ಪಕ್ಕವೇ ಸಮಾದಿ ಮಾಡಿದ್ದರು. ಇಂದು ಕಿರಿಯ ಸಹೋದರ ಧ್ರುವ ಸರ್ಜಾ ಅಣ್ಣನ ಅಂತ್ಯಕ್ರಿಯೆಯನ್ನ ತನ್ನ ಫಾರ್ಮ್ ಹೌಸ್ನಲ್ಲಿ ನಡೆಸಲಿದ್ದಾರೆ.
ತನ್ನ ಮಗಳು ಐಶ್ವರ್ಯ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿದ ನಂತರ, 2015 ರಲ್ಲಿ ಗೇಮ್’ ಚಿತ್ರದ ಪತ್ರಿಕಾಗೋಷ್ಠಿ ವೇಳೆ ಅರ್ಜುನ್ ಸರ್ಜಾ ಒಂದು ಪೌರಾಣಿಕ ಸಿನಿಮಾ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಜೊತೆ ಮನಸಿನಲ್ಲಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದರು. ಆದರೆ, ಅರ್ಜುನ್, ಚಿರು, ಧ್ರುವ ಭೂಮಿಕೆಯ ಆ ಪೌರಾಣಿಕ ಚಿತ್ರ ಸೆಟ್ಟೇರಲೆ ಇಲ್ಲ. ಮುನಿರತ್ನ ಅವರ ಕುರುಕ್ಷೇತ್ರ ಚಿತ್ರದಲ್ಲಿ ಅರ್ಜುನ್ ಸರ್ಜಾ ಕರ್ಣನ ಪಾತ್ರ ನಿರ್ವಹಿಸಿದಾಗ ಹಿಂದೆ ಹೇಳಿದ ಪೌರಾಣಿಕ ಚಿತ್ರದ ಬಗ್ಗೆ ಚಿರಂಜೀವಿ ಸರ್ಜಾ ಜ್ಞಾಪಿಸಿಕೊಂಡಿದ್ದರು. ಆದರೆ, ಎಲ್ಲಾ ಮಾವ ತೀರ್ಮಾನಿಸಿಬೇಕು ಎಂದು ಪತ್ರಕರ್ತರ ಮುಂದೆ ಹೇಳಿಕೊಂಡಿದ್ದರು.
ಚಿರು ಹಾಗೂ ಮೇಘನಾ ರಾಜ್ರದ್ದು ಸುಮಾರು 10 ವರ್ಷಗಳ ಗೆಳೆತನ. ಇವರಿಬ್ಬರ ಪ್ರೀತಿ ಚಿಗುರೊಡೆದಿದ್ದು ಏಕ್ದಮ್ ಅಲ್ಲ. ಮೇಘನಾ ರಾಜ್ ಕುಟುಂಬದಲ್ಲಿ ಕಷ್ಟ ಅಂತ ಬಂದಾಗ ಮೊದಲು ಹಾಜರಾಗುತ್ತಿದ್ದವರು ಚಿರಂಜೀವಿ ಸರ್ಜಾ. ಸಂಬಂಧಿಕರಿಗಿಂತ ಮೊದಲು ಚಿರಂಜೀವಿ ಸರ್ಜಾ ಕಷ್ಟಕ್ಕೆ ನೆರವಾಗುತ್ತಿದ್ದದನ್ನು ಕಂಡ ಮೇಘನಾ ರಾಜ್, ಅವರ ಸ್ನೇಹಪರ ಕಾಳಜಿಗೆ ಮಾರು ಹೋಗಿದ್ದರು. ಈ ಸ್ನೇಹವೇ ಬಳಿಕ ಪ್ರೀತಿಗೆ ತಿರುಗಿತ್ತು. ಮದುವೆಗೆ ಮುಂಚೆಯೇ ನಮ್ಮ ಮನೆಯ ಕಷ್ಟಗಳಿಗೆ ಚಿರು ಬೆಂಗಾವಲಾಗಿ ನಿಲ್ಲುತ್ತ ಇದ್ದರು. ಮದುವೆ ಆದ ಮೇಲೆ ಕೇಳಬೇಕೆ ಎಂದು ಮೇಘನಾ ರಾಜ್ ಹೇಳಿಕೊಂಡಿದ್ದರು. ಆದರೆ, 2018 ರಲ್ಲಿ ಸಪ್ತಪದಿ ತುಳಿದ ಚಿರು-ಮೇಘನಾ ಹೆಚ್ಚು ದಿನ ಒಟ್ಟಿಗೆ ಇರಲು ಸಾಧ್ಯವಾಗಲೇ ಇಲ್ಲ.
ಸಹೋದರ ಧ್ರುವ ಸರ್ಜಾ ಕಂಡ ಯಶಸ್ಸನ್ನು ಚಿರು 11 ವರ್ಷದ ವೃತ್ತಿ ಜೀವನದಲ್ಲಿ ಕಂಡಿರಲಿಲ್ಲ ನಿಜ. ಆದರೆ ಅವರು ಪ್ರತಿಯೊಂದು ಸಿನಿಮಾದಲ್ಲೂ ಕಷ್ಟ ಪಟ್ಟು ಕೆಲಸ ಮಾಡಿದ್ದರು. ಚಿರು ಸಿನಿಮಾಗಳು ಟಿವಿ ಹಕ್ಕಿನಲ್ಲಿ ಒಳ್ಳೆಯ ಬೆಲೆಗೆ ಮಾರಾಟವಾಗುತ್ತಿದ್ದರಿಂದ ಸಿನಿಮಾಗಳ ಆಫರ್ ಕಡಿಮೆ ಆಗಿರಲಿಲ್ಲ. ಚಿರು ವೃತ್ತಿ ಜೀವನದಲ್ಲಿ ಯಾವತ್ತೂ ಕೋಪ, ಬೇಜಾರು ಮಾಡಿಕೊಂಡ ಉದಾಹರಣೆಗಳಿಲ್ಲ. ಆದರೆ ‘ಆದ್ಯಾ’ ಚಿತ್ರ ಬಿಡುಗಡೆ ಬಳಿಕ ಪತ್ರಕರ್ತರನ್ನು ಭೇಟಿ ಮಾಡಿದ ಸಮಯದಲ್ಲಿ ಮಾತ್ರ ಇಂತಹ ಸಿನಿಮಾ ಸೋತು ಹೊಯಿತಲ್ಲ ಎಂದು ಬೇಜಾರು ಮಾಡಿಕೊಂಡಿದ್ದರು.
ಸಿನಿಮಾ ಕುಟುಂಬದಿಂದ ಬಂದಿದ್ದು ಮತ್ತು ಸೋದರ ಮಾವ ಅರ್ಜುನ್ ಸರ್ಜಾ ಹಾಕಿಕೊಟ್ಟ ಮಾರ್ಗ ನನಗೆ ವೃತ್ತಿ ಬದುಕು ಕಟ್ಟಿಕೊಳ್ಳಲು ಸಹಾಯಕವಾಗಿತ್ತು ಎಂದು ಹೇಳುತ್ತಿದ್ದ ಚಿರು, ನನ್ನ ವರ್ಕ್ ಔಟ್, ಜಿಮ್ ಒಂದು ದಿವಸ ಮಿಸ್ ಆದರೆ ಮನೆಯವರು ಬಹಳ ಕಾಳಜಿ ವಹಿಸುತ್ತಾರೆ ಎಂದು ಹೇಳಿದ್ದರು.
ಚಿರು ಬಿರುದು ಭಾವಲಿಗಳನ್ನು ಇಷ್ಟಪಡುತ್ತಿರಲಿಲ್ಲ. ವರದನಾಯಕ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ನಟಿಸಲು ಅವಕಾಶ ಸಿಕ್ಕಿದ್ದನ್ನು ಚಿರು ಸ್ಮರಿಸಿಕೊಳ್ಳುತ್ತಿದ್ದರು. ರುದ್ರ ತಾಂಡವ ಸಿನಿಮಾದ ಮೂಲಕ ನಿರ್ದೇಶ ಗುರು ದೇಶಪಾಂಡೆ ಚಿರುಗೆ ‘ಯುವ ಸಾಮ್ರಾಟ್’ ಬಿರುದು ತಂದು ಕೊಟ್ಟಿದ್ದರು. ಡಾ ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಚಿರುಗೆ ಈ ಬಿರುದು ಕೊಟ್ಟಿತ್ತು.