ಸ್ಯಾಂಡಲ್ವುಡ್ ನಟ, ಯುವಸಾಮ್ರಾಟ್ ಚಿರಂಜೀವಿ ಸರ್ಜಾ ನಮ್ಮನ್ನು ಅಗಲಿ ಇಂದಿಗೆ 1 ತಿಂಗಳು. ಚಿರು ಕುಟುಂಬ ವರ್ಗ ನಿನ್ನೆ ಚಿರಂಜೀವಿ ಸರ್ಜಾ ಅವರ ಮೊದಲನೇ ತಿಂಗಳ ಪುಣ್ಯತಿಥಿ ಕಾರ್ಯವನ್ನು ಮಾಡಿ ಮುಗಿಸಿದೆ.
ಇಂದು ದಿನ ಚೆನ್ನಾಗಿಲ್ಲ ಎಂದು ಪುರೋಹಿತರು ಹೇಳಿದ ಕಾರಣ ಒಂದು ದಿನ ಮುನ್ನವೇ ಚಿರು ತಿಂಗಳ ಕಾರ್ಯವನ್ನು ಮಾಡಲಾಗಿದೆ. ಕನಕಪುರ ರಸ್ತೆಯ ಧ್ರುವಾ ಸರ್ಜಾ ಫಾರ್ಮ್ಹೌಸ್ನಲ್ಲಿ ಚಿರು ಸಮಾಧಿಗೆ ಪೂಜೆ ಸಲ್ಲಿಸಲಾಗಿದೆ. ಮೇಘನಾ, ಧ್ರುವಾ ಸರ್ಜಾ ಸೇರಿದಂತೆ ಕುಟುಂಬ ಸದಸ್ಯರು ಭಾರವಾದ ಮನಸ್ಸಿನಿಂದಲೇ ಚಿರು ಸಮಾಧಿಗೆ ಪೂಜೆ ಸಲ್ಲಿಸಿ ಬಂದಿದ್ದಾರೆ. ಇದು ಖಾಸಗಿ ಸಮಾರಂಭವಾಗಿದ್ದು ಅಭಿಮಾನಿಗಳಿಗಾಗಲೀ, ಸಾರ್ವಜನಿಕರಿಗಾಗಲೀ ಕಾರ್ಯದಲ್ಲಿ ಪ್ರವೇಶವಿರಲಿಲ್ಲ. ಚಿರು ಕುಟುಂಬ ಹಾಗೂ ಆತ್ಮೀಯರಷ್ಟೇ ನಿನ್ನೆಯ ಕಾರ್ಯದಲ್ಲಿ ಭಾಗಿಯಾಗಿದ್ದರು.
ಇನ್ನು ಕೆಲವು ದಿನಗಳಿಂದ ಧ್ರುವಾ ಸರ್ಜಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ಸೇರಿದ್ದಾರೆ ಎಂಬ ಊಹಾಪೋಹಗಳಿಗೆ ಧ್ರುವಾ ಸರ್ಜಾ ತೆರೆ ಎಳೆದಿದ್ದಾರೆ. ಶೀಘ್ರದಲ್ಲೇ ಧ್ರುವಾ 'ಪೊಗರು' ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ. ಚಿರಂಜೀವಿ ಸರ್ಜಾ ಅಭಿನಯದ 'ರಾಜ ಮಾರ್ತಾಂಡ' ಚಿತ್ರಕ್ಕೆ ಕೂಡಾ ಅಣ್ಣನ ಭಾಗದ ಡಬ್ಬಿಂಗ್ ಮಾಡುವುದಾಗಿ ಕೂಡಾ ಹೇಳಿದ್ದಾರೆ.