ಕೊರೊನಾ ಮೊದಲನೇ ಅಲೆ ಸಂದರ್ಭದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ನಟ ಚಿರಂಜೀವಿ ಸರ್ಜಾ ಅಕಾಲಿಕ ಮರಣ ದೊಡ್ಡ ಆಘಾತವನ್ನುಂಟು ಮಾಡಿತ್ತು. ಇವರ ಅಭಿನಯದ ಕೊನೆಯ ಸಿನಿಮಾ ರಾಜಮಾರ್ತಾಂಡ ಇದೀಗ ತೆರೆಗೆ ಬರಲು ಸಿದ್ದವಾಗಿದೆ.
ಚಿರಂಜೀವಿ ಸರ್ಜಾ ಅವರ ಸಾವಿನ ಮುನ್ನವೇ ಚಿತ್ರೀಕರಣ ಪೂರ್ತಿಯಾಗಿತ್ತು. ಹಾಗಾಗಿ ಈ ಚಿತ್ರವನ್ನು ಅವರು ಚಿತ್ರೀಕರಣ ಮುಗಿಸಿದ್ದ ಕೊನೆಯ ಚಿತ್ರ ಅನ್ನಬಹುದು. ಡಬ್ಬಿಂಗ್ ಮಾಡುವುದು ಮಾತ್ರ ಬಾಕಿಯಿತ್ತು. ಚಿರು ಅವರ ಪಾತ್ರಕ್ಕೆ ಅವರ ಸಹೋದರ ಧ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದಾರೆ. ಇದರ ಜೊತೆಗೆ ರಾಜಮಾರ್ತಾಂಡದಲ್ಲಿ ನಟ ದರ್ಶನ್ ಅವರ ಧ್ವನಿ ಸಹ ಕೇಳಬಹುದು. ಬಹುತೇಕ ಚಿತ್ರೀಕರಣ ಮುಗಿಸಿರೋ ರಾಜಮಾರ್ತಾಂಡ ಸಿನಿಮಾವನ್ನ ಸದ್ಯದಲ್ಲೇ ಸೆನ್ಸಾರ್ ಮಂಡಳಿ ವೀಕ್ಷಿಸಲಿದೆ.
ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿಸಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ತಾರಾಬಳಗದಲ್ಲಿದ್ದಾರೆ.
ಗೀತರಚನೆಕಾರರಾಗಿ ಜನಪ್ರಿಯರಾಗಿರುವ ಜೆ.ಕೆ.ರಾಮನಾರಾಯಣ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಶ್ರೀ ಮಾದೇಶ್ವರ ಪ್ರೊಡಕ್ಷನ್ಸ್ ಮೂಲಕ ಪ್ರಣವ್ ಗೌಡ.ಎನ್, ನಿವೇದಿತಾ ಹಾಗೂ ಶಿವಕುಮಾರ್ ನಿರ್ಮಿಸಿದ್ದಾರೆ.
ಚಿತ್ರದಲ್ಲಿ ಸುಮಧುರವಾದ ನಾಲ್ಕು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ 'ರಾಜಮಾರ್ತಾಂಡ'ನ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ. ಜೆ.ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು ಡಿ ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.