ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ ಟೇಶಿ ವೆಂಕಟೇಶ್ ಅಧ್ಯಕ್ಷತೆಯಲ್ಲಿ ಈಗ ಕಾರ್ಯ ನಿರ್ವಹಿಸುತ್ತಿದೆ. ಆದರೆ ಚುನಾವಣೆ ಮೂಲಕ ಅಧ್ಯಕ್ಷರ ಆಯ್ಕೆ ಆಗಿಲ್ಲ. ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಅವರ ಜಾಗಕ್ಕೆ ಟೆಶಿ ವೆಂಕಟೇಶ್ ಬಂದು ಕುಳಿತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ನಟಿ, ನಿರ್ದೇಶಕಿ ರೂಪಾ ಅಯ್ಯರ್, ನಿಯಮ ಬಾಹಿರ ಸಮಿತಿ ಹಾಗೂ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸಂಘದ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಸಂಘದ ಅಧ್ಯಕ್ಷರ ಆಯ್ಕೆ ಕಾನೂನು ಬಾಹಿರ ಎನ್ನುವುದರ ಜೊತೆಗೆ ಸಂಘದ 7,20,621 ರೂಪಾಯಿ ಠೇವಣಿ ಹಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷರಾದ, ಡಾ. ವಿ. ನಾಗೇಂದ್ರ ಪ್ರಸಾದ್, ಕಾರ್ಯದರ್ಶಿ ನಾಗೇಂದ್ರ ಮಾಗಡಿ ಹಾಗೂ ಹಾಲಿ ಅಧ್ಯಕ್ಷ ಟೇಶಿ ವೆಂಕಟೇಶ್ ಅವರ ವಿರುದ್ಧ ನೋಟೀಸ್ ಜಾರಿ ಮಾಡಿದೆ.
ಸಹಕಾರ ಸಂಘಗಳ ಜಿಲ್ಲಾ ನೊಂದಣಾಧಿಕಾರಿಗಳಾದ ಮಂಜುನಾಥ್ ಸಿಂಗ್ ಅವರು ರಂಜಿತ್ ಎಂಬ ವಕೀಲರನ್ನು ಈಗ ಸಂಘದ ವಿಚಾರಣೆಗೆ ನೇಮಿಸಿದ್ದಾರೆ. ಸದರಿ ವಿಚಾರಣಾಧಿಕಾರಿಗಳು ಸಂಘದ ಬೈಲಾಗೆ ವಿರುದ್ಧವಾಗಿ ಚುನಾವಣೆ ನಡೆಸದೆ ಟೇಶಿ ವೆಂಕಟೇಶ್ ಅಧ್ಯಕ್ಷ ಸ್ಥಾನಕ್ಕೆ ಬಂದಿರುವುದು, ಹಿಂದಿನ ಅಧ್ಯಕ್ಷರ ಠೇವಣಿ ಹಣದ ದುರುಪಯೋಗ ಹಾಗೂ ಮೂರನೆಯದಾಗಿ 2018-2019 ವರದಿಯಲ್ಲಿನ ನ್ಯೂನತೆ ವಿಚಾರವಾಗಿ ವಿಚಾರಣೆ ನಡೆಸಿ ವರದಿ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ.