ಬೆಂಗಳೂರು: ಅಂದಿನ ಕಾಲದಲ್ಲಿ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕಾಶಿನಾಥ್ ಯಾವ ವಿಚಾರವನ್ನು ಇಟ್ಟುಕೊಂಡು ‘ಅನಂತನ ಅವಾಂತರ’ (1989 ರಲ್ಲಿ) ಸಿನಿಮಾ ಮಾಡಿದ್ದರೋ, ಹಾಗೆ ಈ ‘ಬ್ರಹ್ಮಚಾರಿ’ ಸಿನಿಮಾದಲ್ಲಿ ಲೈಂಗಿಕ ಸಮಸ್ಯೆ ನಾಯಕನಲ್ಲಿ ಮದುವೆ ನಂತರ ಕಾಣಿಸಿಕೊಂಡರೆ ಏನಾಗುವುದು ಎಂಬುದನ್ನು ಎರಡು ಕಾಮಿಡಿ ಸಿನಿಮಾ ನಿರ್ದೇಶನ ಮಾಡಿದ ಚಂದ್ರಮೋಹನ್ ಹೇಳಿದ್ದಾರೆ.
ಮುಚ್ಚಿಡುವ ವಿಚಾರ ಅಲ್ಲ ಅದು, ಬಿಚ್ಚಿಡುವ ವಿಚಾರ. ಅನೇಕರಿಗೆ ತಿಳಿವಳಿಕೆ ಸಹ ಆಗಬಹುದು ಎಂಬ ಆಶಯ ಚಿತ್ರದಲ್ಲಿ ಇಣುಕುತ್ತದೆ. ಆದರೆ, ಇಡೀ ಚಿತ್ರವನ್ನು ಹಾಸ್ಯ ಲೇಪನದಲ್ಲಿ ಹೇಳುವುದು ಸರಿ ಎಂದು ನಿರ್ದೇಶಕರೂ ಹಾಗೂ ನಿರ್ಮಾಪಕರು ತೀರ್ಮಾನಿಸಿದ್ದಾರೆ. ಬ್ರಹ್ಮಚಾರಿ ಕನ್ನಡದ ಅನಂತನ ಅವಾಂತರ ಸಿನಿಮಾ ಮರಳಿ ತೆರೆಯ ಮೇಲೆ ಬಂದಂತೆ ಅನ್ನಿಸುತ್ತದೆ. ಸನ್ನಿವೇಶಗಳು ಸಹ ಅಷ್ಟೊಂದು ಸಾಮ್ಯತೆ ಇದೆ.
ಈ ಲೈಂಗಿಕ ಸಮಸ್ಯೆ ಅಂತ ಹೇಳುವುದಕ್ಕೆ ನಿರ್ದೇಶಕರು ಒಂದು ಸಮಂಜಸವಾದ ಹಿನ್ನೆಲೆ ಇಟ್ಟಿದ್ದಾರೆ. ಶ್ರೀ ರಾಮಚಂದ್ರನಂತೆ ಹೋಲುವ ನಾಯಕನ ಜೀವನದಲ್ಲಿ
ಚಿಕ್ಕ ವಯಸ್ಸಿನಿಂದ ಅಜ್ಜಿಯ ಕಂಕಳಲ್ಲಿ ಬೆಳದ ಹುಡುಗ. ಆ ಮೇಲೆ ಅನೇಕ ಗುಣಗಳನ್ನು ತುಂಬಿಸಲಾಗುವುದು. ಪೋಕರಿ ಸ್ನೇಹಿತರಿದ್ದರು (ಶಿವರಾಜ್ ಕೆ ಆರ್ ಪೇಟೆ ಮತ್ತು ಅಶೋಕ್) ಈ ರಾಮು ಬಹಳ ಸಬ್ಯಸ್ತ.
ಮದುವೆ ವಯಸ್ಸು ಬಂದಾಗ ಈ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ ರಾಮುವಿಗೆ, ಸುನೀತಾ ಕೃಷ್ಣಮೂರ್ತಿ ಪರಿಚಯವಾಗುತ್ತದೆ. ಪ್ರೀತಿಗೂ ತಿರುಗಿ, ಮದುವೆ ಹಂತ ಮುಟ್ಟುತ್ತದೆ. ಆದರೆ, ಮೊದಲ ರಾತ್ರಿಯಲ್ಲಿ ರಾಮು ಸಮಸ್ಯೆ ಕಂಡುಬರುತ್ತದೆ. ಈ ಸಮಸ್ಯೆಗೆ ಪರಿಹಾರ, ಲೈಂಗಿಕ ವೈದ್ಯ ರಾಮ ರಾವ್ (ದತ್ತಣ್ಣ) ಅವರಿಂದ ಕೆಲವು ಯಡವಟ್ಟುಗಳಾಗಿ ರಾಮು ಹೆಂಡತಿಯಿಂದ ದೂರ ಇರಬೇಕಾಗುತ್ತದೆ.
ಈ ಸಮಯದಲ್ಲಿ ಕೆಲವು ಮನಸ್ತಾಪ ಸಹ ಹುಟ್ಟಿಕೊಳ್ಳುತ್ತದೆ. ಕೊನೆಗೆ ರಾಮು ಸಮಸ್ಯೆಗೆ ಪರಿಹಾರ ಸಿಕ್ಕಿತೆ, ಸುನೀತಾ ಹಾಗೂ ರಾಮು ನಡುವಿನ ಸಂದೇಹ ಹೇಗೆ ನಿವಾರಣೆ ಆಗುತ್ತದೆ ಎಂಬುದನ್ನೂ ತೆರೆಯ ಮೇಲೆ ನೋಡಬೇಕು.
ಸಂದರ್ಭಕ್ಕೆ ಬರುವ ಹಾಸ್ಯವೇ ಇಲ್ಲಿ ಮೇಲುಗೈ. ಅದರಲ್ಲಿ ನೀನಾಸಮ್ ಸತೀಶ್ ಮುಗ್ದತೆಗೆ ಹೆಚ್ಚು ಮಾರ್ಕ್ಸ್ ಸಿಗುತ್ತದೆ. ಅದಿತಿ ಪ್ರಭುದೇವ ಫಸ್ಟ್ ಕ್ಲಾಸ್. ಅದಿತಿ ಕುಣಿದಿರುವ ಒಂದು ಹಾಡು ತಡ್ಕ ತಡ್ಕ.... ಸಕ್ಕತ್ ಕಿಕ್ ಕೊಡುವಂತಿದೆ.
ಅಚ್ಯುತ್ ಕುಮಾರ್ ಅವರ ಗಾಂಭೀರ್ಯ ಮತ್ತು ಕಾಳಜಿ, ಪದ್ಮಜ ರಾವ್ ಅವರ ಅಳು, ಶಿವರಾಜ್ ಕೆ.ಆರ್.ಪೇಟೆ, ಅಶೋಕ್ ಹಾಗೂ ಹಿರಿಯ ನಟ ದತ್ತಣ್ಣ ಹಾಸ್ಯದಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ.
ಧರ್ಮವಿಶ್ ಅವರ ಒಂದು ಹಾಡು ತಡ್ಕ ತಡ್ಕ...ಈಗಾಗಲೇ ಹೆಚ್ಚು ಜನಪ್ರಿಯ ಆಗಿದೆ. ಅವರ ಮತ್ತೊಂದು ಹಿನ್ನೆಲೆಯಲ್ಲಿ ಬರುವ ಹಾಡು ‘ಪ್ರಾರಂಭವಾಗಿದೆ. ಛಾಯಾಗ್ರಾಹಕ ರವಿ ಅವರ ಕೆಲಸ ಮೆಚ್ಚುಗೆ ಪಡೆಯಲು ಕಾರಣ ಅವರ ಲೈಟಿಂಗ್, ಹೊರಾಂಗಣವನ್ನು ಸುಂದರವಾಗಿಸುವ ರೀತಿಯಿಂದ. ‘ಬ್ರಹ್ಮಚಾರಿ’ ಆ ಮೇಲೆ ಆಗ್ತಾನೆ ಸಂಸಾರಿ. ಅದು ಹೇಗೆ ಎಂದು ನೀವೂ ನೋಡಬಹುದು.