ಬೆಂಗಳೂರು: ಬಾಲಿವುಡ್‍ನ ಜನಪ್ರಿಯ ನಟ ಮುಕೇಶ್ ರಿಷಿ ಕನ್ನಡಕ್ಕೆ ಬಂದಿದ್ದಾರೆ. ಮುಕೇಶ್‍ಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈಗಾಗಲೇ ಅವರು ಕೆಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ಒಂಬತ್ತು ವರ್ಷಗಳ ಗ್ಯಾಪ್‍ನ ನಂತರ ಅವರು ಪುನಃ ಪುನೀತ್ ಅಭಿನಯದ 'ಜೇಮ್ಸ್' ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಮುಕೇಶ್ ಕನ್ನಡಕ್ಕೆ ಬಂದಿದ್ದು ದರ್ಶನ್ ಅಭಿನಯದ 25ನೇ ಚಿತ್ರವಾದ 'ಭೂಪತಿ' ಚಿತ್ರದ ಮೂಲಕ. ಈ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದ ಮುಕೇಶ್, ನಂತರ `ಬೊಂಬಾಟ್', `ಸ್ಕೂಲ್ ಮಾಸ್ಟರ್', `ಕಂಠೀರವ' ಮತ್ತು `ಮರ್ಯಾದೆ ರಾಮಣ್ಣ' ಚಿತ್ರಗಳಲ್ಲಿ ನಟಿಸಿದ್ದರು. `ಮರ್ಯಾದೆ ರಾಮಣ್ಣ' ಚಿತ್ರದಲ್ಲಿ ನಟಿಸಿದ್ದೇ ಕೊನೆ, ಆ ನಂತರ ಮುಕೇಶ್ ಯಾವುದೇ ಕನ್ನಡ ಚಿತ್ರದಲ್ಲೂ ನಟಿಸಿರಲಿಲ್ಲ. ಇದೀಗ`ಜೇಮ್ಸ್' ಮೂಲಕ ಅವರು ವಾಪಸಾಗಿದ್ದಾರೆ. `ಜೇಮ್ಸ್' ಚಿತ್ರದಲ್ಲಿ ಅವರ ಪಾತ್ರವೇನು ಎಂಬುದರ ಬಗ್ಗೆ ಇನ್ನೂ ಚಿತ್ರತಂಡದವರು ಗುಟ್ಟು ಬಿಟ್ಟುಕೊಟ್ಟಿಲ್ಲವಾದರೂ, ಮುಕೇಶ್ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
'ಜೇಮ್ಸ್' ಚಿತ್ರದಲ್ಲಿ ಪುನೀತ್‍ಗೆ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸುತ್ತಿದ್ದು, ಮಿಕ್ಕಂತೆ ಶ್ರೀಕಾಂತ್, ಸುಧಾರಾಣಿ, ಮುಕೇಶ್ ರಿಷಿ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ `ಭರ್ಜರಿ' ಖ್ಯಾತಿಯ ಚೇತನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಪತ್ತಿಕೊಂಡ ಕಿಶೋರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚರಣ್‍ರಾಜ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಈಗಾಗಲೇ ಬೆಂಗಳೂರು, ಹೊಸಪೇಟೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.