1993ರಲ್ಲಿ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ನಿರ್ದೇಶಿಸಿದ ನಿಷ್ಕರ್ಷ ಸಿನಿಮಾ ಅಂದಿನ ಕಾಲದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು. ಥ್ರಿಲ್ಲರ್ ಜಾನರ್ನಲ್ಲಿ ಮೂಡಿಬಂದ ಈ ಸಿನಿಮಾ ಅಂದಿನ ದಿನದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆದ ಸಿನಿಮಾ. ವಿಷ್ಣುವರ್ಧನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ಸೆಪ್ಟೆಂಬರ್ 18ಕ್ಕೆ ಸಾಹಸಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬ. ಇದರ ಪ್ರಯುಕ್ತ ಸೆಪ್ಟೆಂಬರ್ 20ರಂದು ನಿಷ್ಕರ್ಷ ಸಿನಿಮಾವನ್ನು ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಈ ಚಿತ್ರದ ನಿರ್ಮಾಪಕ ದೊಡ್ಡನಗೌಡ ಸಿ. ಪಾಟೀಲ್ ಪ್ಲ್ಯಾನ್ ಮಾಡಿದ್ದಾರೆ. ಬ್ಯಾಂಕ್ ದರೋಡೆಯ ಕಥೆಯನ್ನು ಹೊಂದಿದ್ದ ಈ ಚಿತ್ರದಲ್ಲಿ, ಹಾಡು ಇರಲಿಲ್ಲ, ನಾಯಕಿಯೂ ಇಲ್ಲ. ಹೀಗಾಗಿ ಇದನ್ನು ಯಾರೂ ನೋಡುವುದಿಲ್ಲ ಎಂಬ ಮಾತು ಚಿತ್ರ ಬಿಡುಗಡೆಯಾದಾಗ ಕೇಳಿ ಬಂದಿತ್ತು. ಆದರೆ ಈ ಸಿನಿಮಾ ತ್ರಿವೇಣಿ ಮತ್ತು ಸಂತೋಷ್ ಚಿತ್ರಮಂದಿಗಳಲ್ಲಿ 106 ದಿನಗಳು ಪೂರೈಸಿ ದಾಖಲೆ ಮಾಡಿತು. ಅಲ್ಲದೆ ಈ ಸಿನಿಮಾಗೆ ಮೂರು ರಾಜ್ಯಪ್ರಶಸ್ತಿಗಳೂ ಬಂದಿವೆ.
25 ವರ್ಷಗಳ ನಂತರವೂ ತನ್ನ ರೋಚಕತೆ ಕಳೆದುಕೊಳ್ಳದ ಈ ಸಿನಿಮಾ ಈಗ ಮತ್ತೊಮ್ಮೆ ತೆರೆ ಕಾಣುತ್ತಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು, ಡಿಟಿಎಸ್ ಸೌಂಡ್ನೊಂದಿಗೆ ಹಿಂದಿ ಮತ್ತು ಕನ್ನಡದಲ್ಲಿ ಈ ಸಿನಿಮಾ ತೆರೆ ಕಾಣುತ್ತಿದೆ. ಸೃಷ್ಟಿ ಫಿಲಂಸ್ ಬ್ಯಾನರ್ ಅಡಿ ತಯಾರಾದ ಈ ಸಿನಿಮಾದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಬಹಳ ಮನೋಜ್ಞವಾಗಿ ಅಭಿನಯಿಸಿದ್ದರು. ಒಂದೇ ಲೊಕೇಶನ್ನಲ್ಲಿ ಚಿತ್ರೀಕರಣಗೊಂಡ ಈ ಕನ್ನಡ ಸಿನಿಮಾ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು.