ಕೆಲವು ತಿಂಗಳ ಹಿಂದಷ್ಟೇ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಪೈಪೋಟಿ ನಡೆಸಿ, ಬಿಡುಗಡೆ ದಿನಾಂಕವನ್ನು ಫಿಕ್ಸ್ ಮಾಡಿದ್ದ ಬಿಗ್ ಬಜೆಟ್ ಚಿತ್ರಗಳ ನಿರ್ಮಾಪಕರು ಈಗ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅಷ್ಟೇ ಅಲ್ಲ, ಹಲವರು ಇಂತಹ ಸಂದರ್ಭದಲ್ಲಿ ತಮ್ಮ ಚಿತ್ರದ ಬಿಡುಗಡೆ ಬೇಡ ಎಂದು ಪೋಸ್ಟ್ಪೋನ್ ಮಾಡುವುದಕ್ಕೆ ಮುಂದಾಗಿದ್ದಾರೆ.
ಬಿಗ್ ಬಜೆಟ್ ಚಿತ್ರಗಳ ಪೈಕಿ ಈಗಾಗಲೇ ಪೊಗರು, ರಾಬರ್ಟ್ ಮತ್ತು ಯುವರತ್ನ ಚಿತ್ರಗಳು ಬಿಡುಗಡೆಯಾಗಿವೆ. ಮೊದಲೆರೆಡು ಚಿತ್ರಗಳು ಯಾವುದೇ ಸಮಸ್ಯೆ ಇಲ್ಲದೇ ಬಿಡುಗಡೆಯಾಗಿವೆ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಹಾಜರಾತಿಗೆ ಅವಕಾಶ ಮಾಡಿ ಕೊಟ್ಟಿದ್ದು, ಇದರ ಪೆಟ್ಟು ಯುವರತ್ನ ಸಿನಿಮಾದ ಮೇಲೆ ಬಿದ್ದಿದೆ.
ಮುಂದಿನ ದಿನಗಳಲ್ಲಿ ಸಲಗ, ಕೋಟಿಗೊಬ್ಬ-3 ಮತ್ತು ಭಜರಂಗಿ-2 ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಪ್ರಮುಖವಾಗಿ ಸಲಗ ಚಿತ್ರವು ಏ. 15ಕ್ಕೆ ಬಿಡುಗಡೆಯಾಗುತ್ತದೆ ಎಂದು ಘೋಷಿಸಲಾಗಿತ್ತು. ಕೋಟಿಗೊಬ್ಬ 3 ಚಿತ್ರವು ಈ ತಿಂಗಳ ಕೊನೆಗೆ ಬಿಡುಗಡೆಯಾದರೆ, ಅದಾಗಿ 15 ದಿನಗಳ ನಂತರ ಭಜರಂಗಿ 2 ಚಿತ್ರ ಬಿಡುಗಡೆಯಾಗಬೇಕಿತ್ತು. ಈಗ ಶೇ. 50ರಷ್ಟು ಹಾಜರಾತಿಯಿಂದ ಸಲಗ ಚಿತ್ರ ಮುಂದಕ್ಕೆ ಹೋಗಲಿದೆ ಎನ್ನಲಾಗುತ್ತಿದೆ.
ಓದಿ: ದಕ್ಷಿಣ ಆಫ್ರಿಕಾಕ್ಕೆ ಪಲಾಯನ ಮಾಡಲು ನಟ ಅರ್ಜುನ್ ರಾಂಪಾಲ್ ತಯಾರಿ?
ಕೋಟಿಗೊಬ್ಬ-3 ಚಿತ್ರ ಸಹ ಇವೆಲ್ಲ ಗೊಂದಲಗಳು ಮುಗಿಯಲಿ ಎಂದು ಪೋಸ್ಟ್ಪೋನ್ ಮಾಡಿದರೂ ಆಶ್ಚರ್ಯವಿಲ್ಲ. ಭಜರಂಗಿ 2 ಚಿತ್ರದ ಬಿಡುಗಡೆಗೆ ಒಂದೂವರೆ ತಿಂಗಳು ಇರುವುದರಿಂದ ಅಷ್ಟರಲ್ಲಿ ಪರಿಸ್ಥಿತಿ ತಿಳಿಯಾಗಿರಬಹುದು. ಕೇವಲ ಬಿಗ್ ಬಜೆಟ್ ಚಿತ್ರಗಳಷ್ಟೇ ಅಲ್ಲ ಒಂದಿಷ್ಟು ಸಣ್ಣ ಚಿತ್ರಗಳು ಸಹ ಮುಂದಕ್ಕೆ ಹೋಗುತ್ತಿರುವ ಸುದ್ದಿ ಇದೆ.
ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್, ಸೂರಜ್ ಮತ್ತು ಧನ್ಯಾ ರಾಮ್‍ಕುಮಾರ್ ಅಭಿನಯದ ನಿನ್ನ ಸನಿಹಕೆ ಮುಂತಾದ ಚಿತ್ರಗಳು ಏಪ್ರಿಲ್‍ನಲ್ಲಿ ಬಿಡುಗಡೆಯಾಗಬೇಕಿತ್ತು. ಈ ವಿಷಯವನ್ನು ಚಿತ್ರತಂಡದವರು ಸಹ ಘೋಷಿಸಿದ್ದರು. ಆದರೆ, ಇದೀಗ ಈ ಎಲ್ಲಾ ಚಿತ್ರತಂಡದವರಿಗೆ ಆತಂಕ ಎದುರಾಗಿದ್ದು, ಚಿತ್ರಗಳು ಮುಂದಕ್ಕೆ ಹೋಗುವ ನಿರೀಕ್ಷೆ ಇದೆ.
ಇನ್ನು ಏ.20ರವರೆಗೂ ಯಾವುದೇ ಸಾರ್ವಜನಿಕ ಸಭೆ ಮತ್ತು ಸಮಾರಂಭ ಮಾಡಬಾರದು ಎಂದು ಹೇಳಿರುವುದರಿಂದ ಏ.10ಕ್ಕೆ ಹೊಸಪೇಟೆಯಲ್ಲಿ ನಡೆಯಬೇಕಿದ್ದ ಸಲಗ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಮತ್ತು ಏಪ್ರಿಲ್ 15ಕ್ಕೆ ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ಕೋಟಿಗೊಬ್ಬ 3 ಚಿತ್ರದ ಪ್ರೀ-ರಿಲೀಸ್ ಇವೆಂಟ್‍ಗಳು ಮುಂದಕ್ಕೆ ಹೋಗಿವೆ.