ಬೆಂಗಳೂರಿನ ಶೇಷಾದ್ರಿಪುರಂ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅ್ಯಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಜರುಗಿದ 'ಸಂಸೃಷ್ಟಿ 2020 ಅಂತರ ಕಾಲೇಜು ಫೆಸ್ಟಿವಲ್ಗೆ ಬಿಗ್ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿದರು. ಭುವನ್ ಜೊತೆ ಭಜರಂಗಿ ಲೋಕಿ ಕೂಡಾ ಭಾಗವಹಿಸಿ ವಿದ್ಯಾರ್ಥಿಗಳ ಜೊತೆ ಎಂಜಾಯ್ ಮಾಡಿದರು.
ಕಾರ್ಯಕ್ರಮದಲ್ಲಿ ಇಬ್ಬರೂ ನಟರು ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು. 'ಕಾಲೇಜು ಡೇಸ್ ಎಂದರೆ ವಿದ್ಯಾರ್ಥಿ ಜೀವನದಲ್ಲಿ ಬಹಳ ಪ್ರಮುಖ ಘಟ್ಟ. ಅದನ್ನು ಎಂಜಾಯ್ ಮಾಡಿ, ಜೊತೆಗೆ ಓದಿನ ಕಡೆ ಗಮನ ಹರಿಸಿ' ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಭುವನ್ ಪೊನ್ನಣ್ಣ, ಕಿಚ್ಚ ಸುದೀಪ್ ಅಭಿನಯದ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ಟೈಟಲ್ ಟ್ರ್ಯಾಕ್ ಹಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಭಜರಂಗಿ ಲೋಕಿ ಕುರಿತಾದ ಒಂದು ಎವಿಯನ್ನು ಕಾಲೇಜು ಆಡಳಿತ ಮಂಡಳಿ ಪ್ರದರ್ಶನ ಮಾಡಿತು. ಇದಕ್ಕೆ ಫಿದಾ ಆದ ಭಜರಂಗಿ ಲೋಕಿ, ಕಾಲೇಜು ಆಡಳಿತ ಮಂಡಳಿಗೆ ಧನ್ಯವಾದ ಹೇಳಿದರು. ಅಲ್ಲದೆ ತಮ್ಮ ಕಾಲೇಜು ದಿನಗಳನ್ನು ವೇದಿಕೆ ಮೇಲೆ ಮೆಲುಕು ಹಾಕಿದರು. ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದು 'ಭಜರಂಗಿ' ಹಾಗೂ 'ರಥಾವರ' ಚಿತ್ರದ ಖಡಕ್ ಡೈಲಾಗ್ ಹೇಳಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದರು.
ನಂತರ ಮಾತನಾಡಿದ ಲೋಕಿ 'ನಾನು ಇಲ್ಲಿಗೆ ಬಂದಿದ್ದರಿಂದ ನನ್ನ ಕಾಲೇಜು ದಿನಗಳ ನೆನಪಾಯ್ತು. ನನ್ನ ಬಗ್ಗೆ ಮಾಡಿದ ವಿಡಿಯೋ ಬಹಳ ಇಷ್ಟ ಆಯ್ತು. ಸಾಮಾನ್ಯವಾಗಿ ನಾನು ಯಾವುದೇ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ. ಆದರೆ ನಿಮ್ಮ ಕಾಲೇಜು ಕಾರ್ಯಕ್ರಮಕ್ಕೆ ಬರಲೇಬೇಕು ಎನ್ನಿಸಿತು. ಇಂದು ನನಗೆ ಬಹಳ ಸಂತೋಷದ ದಿನ ಎಂದು ಸಂತೋಷ ಹಂಚಿಕೊಂಡರು.
ವೇದಿಕೆ ಮೇಲೆ ಕಾಲೇಜು ಪ್ರಿನ್ಸಿಪಾಲ್ ಶಿವಣ್ಣ ಮಾತನಾಡಿ, ಎರಡು ದಿನಗಳು ನಡೆಯುವ ಅಂತರ ಕಾಲೇಜು ಫೆಸ್ಟಿವಲ್ನಲ್ಲಿ ಸುಮಾರು 30 ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳಿಗೆ ಸಿನಿಮಾ ನಟರು ಬಂದರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಎನ್ನಿಸುತ್ತದೆ. ಇಂದು ಈ ಇಬ್ಬರೂ ನಟರು ಬಂದಿದ್ದು ನಮಗೆ ಹಾಗೂ ವಿದ್ಯಾರ್ಥಿಗಳಿಗೆ ಬಹಳ ಸಂತೋಷವಾಯ್ತು ಎಂದು ಭುವನ್ ಹಾಗೂ ಲೋಕಿಗೆ ಧನ್ಯವಾದ ಹೇಳಿದರು.