ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ಗಣೇಶ ಹಬ್ಬದಂದು ಬಿಡುಗಡೆಯಾಗುತ್ತಿದೆ. ಕೊರೊನಾ ಕೊಂಚ ತಗ್ಗಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸಿನಿಮಾ ಬಿಡುಗಡೆ ಬಗ್ಗೆ ನಿರ್ಮಾಪಕ ಜಯಣ್ಣ ಘೋಷಿಸಿದ್ದಾರೆ.
ಒಂದು ತಿಂಗಳ ಹಿಂದೆಯೇ ಭಜರಂಗಿ 2 ಚಿತ್ರವನ್ನು ಸೆ.10ಕ್ಕೆ ಬಿಡುಗಡೆ ಮಾಡುವುದಾಗಿ ಜಯಣ್ಣ ತಿಳಿಸಿದ್ದರು. ಕೊರೊನಾ ಕಡಿಮೆಯಾಗುತ್ತಿರುವ ಕಾರಣ ಸಿನಿಮಾ ಮಂದಿರಗಳನ್ನು ತೆರೆಯುವ ಸೂಚನೆಯಿದ್ದು, ಹೀಗಾಗಿ ಅಂದುಕೊಂಡ ದಿನದಂದೇ ಸಿನಿಮಾ ರಿಲೀಸ್ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ವೀಕೆಂಡ್ ಲಾಕ್ಡೌನ್ ತೆರವಾಗುವ ನಿರೀಕ್ಷೆ ಇದೆ. ಅಷ್ಟೇ ಅಲ್ಲದೆ, ಸರ್ಕಾರವು ಥಿಯೇಟರ್ಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅವಕಾಶ ಕೊಡುವ ಸಾಧ್ಯತೆಯೂ ಇದೆ. ಒಂದು ಪಕ್ಷ ಕೊಡದಿದ್ದರೂ ಶೇ.50ರಷ್ಟು ಹಾಜರಾತಿಯ ನಡುವೆ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ತೀರ್ಮಾನಿಸಲಾಗಿದೆ.
ಈಗಾಗಲೇ, ವಿಜಯ್ ಅಭಿನಯದ ತಮಿಳು ಚಿತ್ರ ಮಾಸ್ಟರ್ ಅಂಥದ್ದೊಂದು ಸಾಧನೆ ಮಾಡಿ ಗೆದ್ದಿದೆ. ಇದನ್ನೇ ಉದಾಹರಣೆಯನ್ನಾಗಿ ಇಟ್ಟುಕೊಂಡಿರುವ ಜಯಣ್ಣ, ಶೇ. 50ರಷ್ಟು ಹಾಜರಾತಿ ಇದ್ದರೂ ಪರವಾಗಿಲ್ಲ. ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಯೋಚಿಸುತ್ತಿದ್ದಾರೆ. ಅಂದರೆ, ಚಿತ್ರವು ರಾಜ್ಯಾದ್ಯಂತ 350ರಿಂದ 400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಸೆಪ್ಟೆಂಬರ್ 1ರಿಂದ ರಿಲೀಸ್ ಆಗಲಿದೆ.