ಹಿಂದಿ ಕಿರುತೆರೆಯಲ್ಲಿ 'ವಿಕ್ರಮ್ ಔರ್ ಬೇತಾಲ್' ಬಹಳ ಪ್ರಸಿದ್ಧಿ ಪಡೆದಿತ್ತು. ಹಿಂದಿ ಭಾಷೆಯಲ್ಲಿ ಬಂದ ಆ ಧಾರಾವಾಹಿಯಲ್ಲಿ ರಾಮಾಯಣದ ಅರುಣ್ ಗೋವಿಲ್ ನಟಿಸಿದ್ದರು. ಇದೀಗ ಕನ್ನಡದಲ್ಲಿ 'ಬೇತಾಳ' ಎಂಬ ಸಿನಿಮಾ ತಯಾರಾಗುತ್ತಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ನಾಯಕ ಸಾಫ್ಟ್ ವೇರ್ ಇಂಜಿನಿಯರ್. ಅವನಿಗೆ ಕೆಟ್ಟ ಕನಸುಗಳು ಬರುತಿರುತ್ತವೆ. ಆ ಕಾರಣದಿಂದ ಮನೆಯನ್ನು ಬದಲಿಸಲು ನಿರ್ಧರಿಸುತ್ತಾನೆ. ಆದರೆ ಅವನು ಹುಡುಕಿದ ಹೊಸ ಮನೆಯಲ್ಲಿ ದೆವ್ವ ಇದೆ ಎಂದು ಅವನಿಗೆ ತಿಳಿದಿರುವುದಿಲ್ಲ. ತಿಳಿದ ನಂತರ ದೆವ್ವಕ್ಕೂ ಒಂದು ಆಸೆ ಇದೆ ಎಂಬ ವಿಚಾರ ಅರಿವಾಗುತ್ತದೆ. ಆ ದೆವ್ವದ ಆಸೆಯನ್ನು ಪೂರೈಸಲು ನಾಯಕ ಮುಂದಾಗುತ್ತಾನೆ. ಅಲ್ಲಿಂದ ಅವನಿಗೆ ಅನೇಕ ಅನಿರೀಕ್ಷಿತ ಘಟನೆಗಳು ಸಂಭವಿಸುತ್ತದೆ. ಕೆಲವು ಸಂದರ್ಭಗಳನ್ನು ಹಾಸ್ಯದ ಮೂಲಕ ಹೇಳಲಾಗಿದೆ. ನಾಯಕನನ್ನು ಆ ದೆವ್ವ ಬೇತಾಳದಂತೆ ಹಿಂಬಾಲಿಸುತ್ತದೆ.
ಕಸ್ತೂರಿ ಜಗನ್ನಾಥ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಸ್ಮೈಲ್ ಶಿವು ಸಾಫ್ಟ್ ವೇರ್ ಇಂಜಿನಿಯರ್ ಆಗಿ ಅಭಿನಯದ ಜೊತೆಗೆ ಚಿತ್ರಕ್ಕೆ ಹಣ ಕೂಡಾ ಹೂಡಿದ್ದಾರೆ. ಬಿಗ್ಬಾಸ್ನಲ್ಲಿ ಸ್ಪರ್ಧಿ ಆಗಿದ್ದ ಸೋನು ಪಾಟೀಲ್ ಈ ಚಿತ್ರದಲ್ಲಿ ನಾಯಕಿ. ಅನಿಕ್ ದೆವ್ವದ ಪಾತ್ರದಲ್ಲಿ ನಟಿಸಿದ್ದಾರೆ. ಕಾವ್ಯ ಗೌಡ ಚಿತ್ರದಲ್ಲಿ ಎರಡನೇ ನಾಯಕಿ. ಭೂಮಿಕಾ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ತಯಾರಾಗುತ್ತಿದೆ.
ಬೆಂಗಳೂರು ಸುತ್ತ ಮುತ್ತ ಮಾತಿನ ಭಾಗದ ಚಿತ್ರೀಕರಣ ಮಾಡಲಾಗಿದ್ದು ಚಿಕ್ಕಮಗಳೂರು, ಸಕಲೇಶಪುರ ಹಾಗೂ ಇನ್ನಿತರ ಸ್ಥಳಗಳಲ್ಲಿ ಹಾಡುಗಳ ಚಿತ್ರೀಕರಣ ಮಾಡಲಾಗಿದೆ. 'ಚುಟು ಚುಟು ಅಂತೈತಿ' ಖ್ಯಾತಿಯ ಶಿವು ಬೆರ್ಗಿ ಈ ಚಿತ್ರಕ್ಕೆ ಮೂರು ಹಾಡುಗಳನ್ನು ರಚಿಸಿದ್ದಾರೆ. ರಾಜ್ ಕಿಶೋರ್ ಚಿತ್ರದ ಹಾಡುಗಳಿಗೆ ಸಂಗೀತ ಒದಗಿಸಿದ್ದಾರೆ. ಸೀ ಬರ್ಡ್ ಕುಮಾರ್ ಎಂಬುವವರು 'ಬೇತಾಳ' ಚಿತ್ರಕ್ಕೆ ಸಹ ನಿರ್ಮಾಪಕರು. ಸದ್ಯಕ್ಕೆ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಶೀಘ್ರವೇ ಬಿಡುಗಡೆಯಾಗಲಿದೆ.