ಇದೀಗ ಸಿನಿಮಾ ಲೋಕದಲ್ಲಿ ಸಂಭ್ರಮವೋ ಸಂಭ್ರಮ. ಒಂದರ ನಂತರ ಮತ್ತೊಂದು ಸಾಲುಸಾಲು ಸಿನಿಮಾಗಳು ಬರುತ್ತಲೇ ಇವೆ. ಇದೀಗ ಮೊಟ್ಟ ಮೊದಲ ಬಾರಿಗೆ ಬಂಜಾರ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ಕನ್ನಡ ಸೇರಿದಂತೆ 10 ಭಾಷೆಗಳಲ್ಲಿ ನಟಿಸಿರುವ ಬಹುಭಾಷಾ ನಟ ಸುಮನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸೇವಾ ದಾಸ್ ಎಂಬ ಬಂಜಾರ ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.
ನಾನು ಚಿತ್ರರಂಗಕ್ಕೆ ಬಂದು 40 ವರ್ಷ ಕಳೆದಿದೆ. ನನ್ನ ತಂದೆ-ತಾಯಿ ಮಂಗಳೂರಿನವರು. ನಾನು ಹುಟ್ಟಿದ್ದು ಚೆನ್ನೈನಲ್ಲಿ. ಈತನಕ ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಇದೇ ಮೊದಲ ಬಾರಿಗೆ ಬಂಜಾರ ಚಿತ್ರದಲ್ಲಿ ನಟಿಸಿದ್ದೇನೆ. ಸಂತ ಸೇವಾಲಾಲ್ ಅವರ ಕೃಪೆಯಿಂದ ಉತ್ತಮ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇದೇ ಏಪ್ರಿಲ್ ಒಂದರಂದು ಚಿತ್ರ ಬಿಡುಗಡೆಯಾಗುತ್ತಿದೆ ಎಂದು ನಟ ಸುಮನ್ ತಿಳಿಸಿದ್ದಾರೆ.
ಬಂಜಾರ ಭಾಷೆ ಮಾತನಾಡುವ ಜನ ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ವಾಸವಾಗಿದ್ದಾರೆ. ಈಗ ವಿದೇಶದಲ್ಲೂ ನೆಲೆಸಿದ್ದಾರೆ. ನಮ್ಮ ಜನಾಂಗದ ಶಕ್ತಿಯಾಗಿರುವ ಸಂತ ಸೇವಾಲಾಲ್ ಅವರ ಕೃಪೆಯಿಂದ ಇದೇ ಮೊದಲ ಬಾರಿಗೆ ಈ ಚಿತ್ರವನ್ನು ಭಾರತದ ವಿವಿಧ ಕಡೆ ಬಿಡುಗಡೆ ಮಾಡುತ್ತಿದ್ದೇವೆ. ವಿದೇಶದಲ್ಲೂ ಸೇವಾ ದಾಸ್ ಬಿಡುಗಡೆಯಾಗುತ್ತಿರುವುದು ಖುಷಿ ತಂದಿದೆ ಎಂದರು ನಿರ್ಮಾಪಕ ಸೀತಾರಾಂ ಬಡಾವತ್.
ಬಂಜಾರ ಸಮುದಾಯದ ಸದ್ಗುರುಗಳು, ಮುಖಂಡರು, ಮತ್ತೊಬ್ಬ ನಿರ್ಮಾಪಕ ವಿನೋದ್ ರೈನಾ, ಚಿತ್ರದಲ್ಲಿ ಅಭಿನಯಿಸಿರುವ ಅನೇಕ ಕಲಾವಿದರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಓದಿ: ಪುನೀತ್ ಮತ್ತು ನಾನು ಗೋಲಿ ಆಡಿದ್ದೇವೆ, ಜಗಳವಾಡಿದ್ದೇವೆ :ತೆಲುಗು ಶೋನಲ್ಲಿ ಆ್ಯಕ್ಷನ್ ಕ್ವೀನ್ ಮಾಲಾಶ್ರೀ