ರಂಗನಾಯಕಿ ಧಾರಾವಾಹಿಯಲ್ಲಿ ವಿಲನ್ ಆಗಿ ಅಭಿನಯಿಸಿದ್ದ ಅನುಶ್ರೀ ಜನಾರ್ಧನ್ ಇದೀಗ ಮತ್ತೊಮ್ಮೆ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಳ್ಳಲು ತಯಾರಾಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಸ್ವಪ್ನ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರಲಿರುವ ಸತ್ಯ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ಗೆ ಅನುಶ್ರೀ ಬಣ್ಣ ಹಚ್ಚಲಿದ್ದಾರೆ.
"ಸತ್ಯ ಧಾರಾವಾಹಿಯಲ್ಲಿ ನಾನು ನೆಗೆಟಿವ್ ರೋಲ್ ಮೂಲಕ ನಿಮ್ಮ ಮುಂದೆ ಬರುತ್ತಿದ್ದೇನೆ. ನನ್ನ ಕನಸು ನನಸಾದ ಖುಷಿಯಲ್ಲಿದ್ದೇನೆ. ನನಗೆ ವಿಲನ್ ಪಾತ್ರದಲ್ಲಿ ನಟಿಸುವುದೆಂದರೆ ತುಂಬಾ ಇಷ್ಟ" ಎನ್ನುವ ಅನುಶ್ರೀಗೆ ಮುಗ್ಧ, ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸ್ವಲ್ಪವೂ ಇಷ್ಟವಿಲ್ಲವಂತೆ. ಬದಲಿಗೆ ವಿಲನ್ ಆಗಿ ಕಾಣಿಸಿಕೊಳ್ಳುವುದೇ ಅವರಿಗೆ ಖುಷಿಯಂತೆ. ಅದರಂತೆ ಅವರಿಷ್ಟದ ಪಾತ್ರ ಅನುಶ್ರೀಗೆ ದೊರಕಿದೆ.
ಇದರ ಜೊತೆಗೆ ಅನುಶ್ರೀ ಸತ್ಯ ಧಾರಾವಾಹಿಯಲ್ಲಿ ಸ್ಟೈಲಿಶ್ ಲುಕ್ ಮೂಲಕವೂ ಮನೆ ಮಾತಾಗಲಿದ್ದಾರೆ. ರಂಗನಾಯಕಿ ಧಾರಾವಾಹಿಯಲ್ಲಿಯೂ ತಮ್ಮ ಔಟ್ ಫಿಟ್ ಮೂಲಕ ಕಿರುತೆರೆ ಪ್ರಿಯರ ಮನ ಸೆಳೆದಿರುವ ಅನುಶ್ರೀ, ಈ ಧಾರಾವಾಹಿಯಲ್ಲಿಯೂ ಸ್ಟೈಲ್ ಮೂಲಕ ಗಮನ ಸೆಳೆಯಲಿದ್ದಾರೆ. ಅನುಶ್ರೀ ಜನಾರ್ಧನ್ ಈ ಧಾರಾವಾಹಿಯಲ್ಲಿ ನಾಯಕನ ಅಕ್ಕನ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
ಪೌರಾಣಿಕ ಧಾರಾವಾಹಿ ಮಹಾಕಾಳಿಯ ಮೂಲಕ ಕಿರುತೆರೆ ಪಯಣ ಶುರು ಮಾಡಿದ್ದ ಇವರು, ಮುಂದೆ ಜೈ ಹನುಮಾನ್, ಶ್ರೀವಿಷ್ಣು ದಶಾವತಾರಗಳಲ್ಲಿ ನಟಿಸಿದ್ದಾರೆ. ರಂಗನಾಯಕಿಯ ವಿಭಾ ಆಗಿ ನಟನಾ ಲೋಕದಲ್ಲಿ ಮನೆ ಮಾತಾಗಿರುವ ಅನುಶ್ರೀ, ಬ್ರಹ್ಮಗಂಟು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದೀಗ ಸತ್ಯ ಮೂಲಕ ಮತ್ತೊಮ್ಮೆ ತಮ್ಮಿಷ್ಟದ ಪಾತ್ರದ ಮೂಲಕ ಮಿಂಚಲಿದ್ದಾರೆ.