2021ಜನವರಿ 1 ರಂದು ರಾಘವೇಂದ್ರ ರಾಜ್ಕುಮಾರ್ ಅಭಿನಯದ ರಾಜತಂತ್ರ ಬಿಡುಗಡೆ ಆಗುವ ಮೂಲಕ ಈ ವರ್ಷ ಬಿಡುಗಡೆಯಾದ ಮೊದಲ ಸಿನಿಮಾ ಎಂಬ ಹೆಸರು ಪಡೆಯಿತು. ಈ ಸಿನಿಮಾ ನಂತರ ಯಾವ ಚಿತ್ರ ಬಿಡುಗಡೆಯಾಗಬಹುದು ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ. ರಾಬರ್ಟ್, ಪೊಗರು, ಇನ್ಸ್ಪೆಕ್ಟರ್ ವಿಕ್ರಂ ಚಿತ್ರಕ್ಕೆ ಮುನ್ನವೇ ಮತ್ತೊಂದು ಸಿನಿಮಾ ತೆರೆ ಕಾಣುತ್ತಿದೆ.
ಅನೀಶ್ ತೇಜೇಶ್ವರ್ ಅಭಿನಯದ 'ರಾಮಾರ್ಜುನ' ಸಿನಿಮಾ ಇದೇ ತಿಂಗಳ 29 ರಂದು ಬಿಡುಗಡೆಯಾಗುತ್ತಿದೆ. ಇನ್ನು 10 ದಿನಗಳಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಇನ್ನಷ್ಟೇ ಪ್ರಚಾರದ ಕೆಲಸಗಳು ಶುರುವಾಗಬೇಕಿದೆ. 'ರಾಮಾರ್ಜುನ' ಚಿತ್ರವು ಎರಡು ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು. ಕಾರಣಾಂತರಗಳಿಂದ ಚಿತ್ರ ವಿಳಂಬವಾಗಿತ್ತು. ಇನ್ನೇನು ಚಿತ್ರ ಮುಗಿದು ಬಿಡುಗಡೆಯಾಗಬೇಕು ಎನ್ನುವಷ್ಟರಲ್ಲಿ ಲಾಕ್‍ಡೌನ್ ಬಂತು. ಲಾಕ್‍ಡೌನ್ ಮುಗಿದ ನಂತರ ಚಿತ್ರವನ್ನು ಸಂಪೂರ್ಣ ಮುಗಿಸಿ, ಸೆನ್ಸಾರ್ ಕೂಡಾ ಮಾಡಿಸಿದ್ದ ಅನೀಶ್, ಬಿಡುಗಡೆ ಮಾಡಲು ಕಾಯುತ್ತಿದ್ದರು. ಈಗ ನೋಡಿದರೆ, ಮುಂದಿನ ಹತ್ತು ದಿನಗಳಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಅವರು ಘೋಷಿಸಿದ್ದಾರೆ.
ಇದನ್ನೂ ಓದಿ: 'ರಾಧೆ' ಸಿನಿಮಾ ರಿಲೀಸ್ ಬಗ್ಗೆ ಮಾಹಿತಿ ಕೊಟ್ಟ ಸಲ್ಮಾನ್ ಖಾನ್
ಫೆಬ್ರವರಿಯಿಂದ ಒಂದೊಂದೇ ಬಿಗ್ ಬಜೆಟ್ ಮತ್ತು ಸ್ಟಾರ್ಗಳ ಸಿನಿಮಾಗಳು ಬಿಡುಗಡೆಯಾಗಲಿವೆ. ಆ ಸಂದರ್ಭದಲ್ಲಿ ಸ್ಪರ್ಧೆ ಜೊತೆಗೆ ಚಿತ್ರಮಂದಿರಗಳ ಸಮಸ್ಯೆಯೂ ಎದುರಾಗುತ್ತದೆ. ಆ ಕಾರಣದಿಂದ ಅನೀಶ್ ತಮ್ಮ ಚಿತ್ರವನ್ನು ಇತರ ಸಿನಿಮಾಗಳಿಗಿಂತ ಮುನ್ನವೇ ಬಿಡುಗಡೆ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.'ರಾಮಾರ್ಜುನ' ಚಿತ್ರದಲ್ಲಿ ಅನೀಶ್ ನಟಿಸಿರುವುದು ಮಾತ್ರವಲ್ಲ, ತಮ್ಮ ವಿಂಕ್ವಿಶಲ್ ಬ್ಯಾನರ್ ಮೂಲಕ ತಾವೇ ನಿರ್ಮಿಸಿ, ನಿರ್ದೇಶನ ಕೂಡಾ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಈ ಚಿತ್ರದ ಸಹನಿರ್ಮಾಪಕರು. ಈ ಚಿತ್ರ ತೆಲುಗಿಗೂ ಡಬ್ ಆಗಿದ್ದು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.