ಹೈದರಾಬಾದ್: ಸದಾ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಅಲ್ಲು ಅರ್ಜುನ್ (Allu Arjun) ಈ ನಡುವೆ ಕೆಲವು ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಾರೆ.
ಸದ್ಯ ಪುಷ್ಪ ಸಿನಿಮಾದ ಚಿತ್ರೀಕರಣದಲ್ಲಿರುವ ಬನ್ನಿ, ಬ್ಯುಸಿ ಶೆಡ್ಯೂಲ್ ಮಧ್ಯದಲ್ಲಿ ಜಾಹೀರಾತೊಂದರಲ್ಲಿ ನಟಿಸಿದ್ದಾರೆ. ಆದ್ರೆ ಈ ಜಾಹೀರಾತು ಇದೀಗ ಅವರಿಗೆ ತಲೆನೋವು ತಂದಿದೆ. ಹೌದು, ಟಿಎಸ್‌ಆರ್‌ಟಿಸಿ (ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ) ಎಂಡಿ ಸಜ್ಜನರ್ ಅವರು ನಟನಿಗೆ ಲೀಗಲ್ ನೋಟಿಸ್(Legal notice) ಕಳುಹಿಸಿದ್ದಾರೆ. ಆರ್‌ಟಿಸಿ ಕುರಿತು ಜಾಹೀರಾತಿನಲ್ಲಿ ಅಪಹಾಸ್ಯ ಮಾಡಿದ್ದಕ್ಕಾಗಿ ಅಲ್ಲು ಅರ್ಜುನ್‌ಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದಾರೆ.
ಜಾಹೀರಾತಿನಲ್ಲಿ ಏನಿದೆ?:
ರ‍್ಯಾಪಿಡೋವನ್ನು (ಬೈಕ್ ಟ್ಯಾಕ್ಸಿ ಸೇವೆ -Rapido) ಅನ್ನು ಪ್ರಚಾರ ಮಾಡುವ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್ ಅದರಲ್ಲಿ ದೋಸೆ ಮಾರುವ ವ್ಯಕ್ತಿಯಾಗಿ ನಟಿಸಿದ್ದು, ಓರ್ವ ವ್ಯಕ್ತಿಯೊಂದಿಗೆ ಮಾತನಾಡುತ್ತಾ 'ತಮ್ಮ ದೋಸೆ ತಿನ್ನಬೇಕು ಅಂದ್ರೆ ಎರಡೇ ಜಾಗ ಒಂದು ಈ ಗುರು ಹತ್ರ, ಇನ್ನೊಂದು ಯಾವಾಗ್ಲೂ ರಷ್ ಆಗಿರೋ ಆ ಬಸ್ ಅಲ್ಲಿ, ಮಾಮೂಲಿ ದೋಸೆ ತರ ಆ ಬಸ್ ಹತ್ತುವವರನ್ನು ಕೂಡ ಚಟ್ನಿ ಅರೆದು, ಕೈಮಾ ಮಾಡಿ ಮಸಾಲೆ ದೋಸೆ ಮಾಡಿ ಇಳಿಸುತ್ತಾರೆ, ಅದಕ್ಕೆ ನಿಮಗೆ ಯಾಕೆ ಈ ರಿಸ್ಕು, ಸುಮ್ನೆ ರ‍್ಯಾಪಿಡೋ ಬುಕ್ ಮಾಡಿ ಅದರಲ್ಲಿ ಹೋಗಿ ದೋಸೆ ತಿರುಗಿಸೋ ಅಷ್ಟು ಸುಲಭವಾಗಿ ಟ್ರಾಫಿಕ್ನಲ್ಲೂ ನುಗ್ಗಿಸಿಕೊಂಡು ಹೋಗಬಹುದು, ಉಳಿತಾಯ ಕೂಡ ಮಾಡಬಹುದು' ಎಂದು ಹೇಳುವ ಮೂಲಕ ಟಿಎಸ್‌ಆರ್‌ಟಿಸಿ ಬಸ್ ಅನ್ನು ಜಾಹಿರಾತಿನಲ್ಲಿ ಅಪಹಾಸ್ಯ ಮಾಡಿದ್ದಾರೆ ಎಂದು ಟಿಎಸ್‌ಆರ್‌ಟಿಸಿ ಎಂಡಿ ಆರೋಪಿಸಿದ್ದಾರೆ.
ರ‍್ಯಾಪಿಡೋ ಬೈಕ್ ಬಸ್‌ಗಳಿಗಿಂತ ಹೆಚ್ಚು ವೇಗ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಈ ಹೇಳಿಕೆ ಸೂಚಿಸುತ್ತದೆ. ಈ ಹಿನ್ನೆಲೆ ಜಾಹೀರಾತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ನಟ ಅಲ್ಲು ಅರ್ಜುನ್ ಹಾಗೂ ರ‍್ಯಾಪಿಡೋಗೆ ಟಿಎಸ್‌ಆರ್‌ಟಿಸಿ ನೋಟಿಸ್ ಜಾರಿ ಮಾಡಿದೆ.ಹಲವು ವರ್ಷಗಳಿಂದ ಜನ ಸಾಮಾನ್ಯರ ಸೇವೆಯಲ್ಲಿರುವ ಟಿಎಸ್‌ಆರ್‌ಟಿಸಿ ಬಸ್ ಕುರಿತು ತೋರಿಸುವ ಹೇಳಿಕೆಯನ್ನು ಖಂಡಿಸುವುದಾಗಿ ಸಜ್ಜನರ್ ತಿಳಿಸಿದ್ದಾರೆ.
ಸಾರ್ವಜನಿಕ ಸಾರಿಗೆಗೆ ಉತ್ತೇಜನ ನೀಡುವ ಜಾಹೀರಾತುಗಳಲ್ಲಿ ನಟರು ನಟಿಸಬೇಕು ಎಂದು ಇದೇ ವೇಳೆ ಸಜ್ಜನರ್ ಸಲಹೆ ನೀಡಿದ್ದಾರೆ.