ಕಳೆದ ವರ್ಷ ಕೊರೊನಾ ಲಾಕ್ಡೌನ್ ಘೋಷಣೆಯಾದ ಸಂದರ್ಭದಲ್ಲಿ ಪಿಎಂ ಪರಿಹಾರ ನಿಧಿಗೆ 25 ಕೋಟಿ ರೂ. ಕೊಡುವುದರ ಜೊತೆಗೆ ಹಲವರಿಗೆ ನೆರವಾಗುವ ಮೂಲಕ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಾದರಿಯಾಗಿದ್ದರು. ಇದೀಗ 3,600 ನೃತ್ಯ ಕಲಾವಿದರಿಗೆ ತಿಂಗಳ ರೇಷನ್ ಕಿಟ್ ಕೊಡುವುದಕ್ಕೆ ಮುಂದಾಗಿದ್ದಾರೆ.
ಅಕ್ಷಯ್ ಕುಮಾರ್ ಬಾಲಿವುಡ್ನ 1,600 ಜ್ಯೂನಿಯರ್ ನೃತ್ಯ ನಿರ್ದೇಶಕರು ಮತ್ತು 2,000 ಹಿನ್ನೆಲೆ ನೃತ್ಯ ಕಲಾವಿದರಿಗೆ ರೇಷನ್ ಕಿಟ್ ವಿತರಿಸುವುದಕ್ಕೆ ಒಪ್ಪಿಕೊಂಡಿದ್ದಾರಂತೆ. ಅದಕ್ಕೆ ಕಾರಣವಾಗಿದ್ದು ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ. ಇತ್ತೀಚೆಗೆ ಗಣೇಶ್ ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಕ್ಷಯ್ ಮತ್ತು ಗಣೇಶ್ ಆಚಾರ್ಯ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಹಲವು ಚಿತ್ರಗಳಲ್ಲಿ ಅಕ್ಷಯ್ಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.
ಅದೇ ಸ್ನೇಹದಲ್ಲಿ ಗಣೇಶ್ಗೆ ತಮ್ಮ 50ನೇ ವರ್ಷದ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಬೇಕು ಎಂದು ಅಕ್ಷಯ್ ಕೇಳಿದ್ದಾರೆ. ಅದಕ್ಕೆ ಗಣೇಶ್, ಸಾಧ್ಯವಾದರೆ ಕಷ್ಟದಲ್ಲಿರುವ ಜ್ಯೂನಿಯರ್ ನೃತ್ಯ ನಿರ್ದೇಶಕರು ಮತ್ತು ಹಿನ್ನೆಲೆ ನೃತ್ಯ ಕಲಾವಿದರಿಗೆ ಏನಾದರೂ ಸಹಾಯ ಮಾಡಿ ಎಂದು ಹೇಳಿದ್ದಾರೆ.
ಇದಕ್ಕೆ ತಕ್ಷಣ ಒಪ್ಪಿಕೊಂಡ ಅಕ್ಷಯ್, 3,500 ಮಂದಿಗೆ ರೇಷನ್ ಕಿಟ್ ಒದಗಿಸುವುದಾಗಿ ತಿಳಿಸಿದ್ದಾರೆ. ರೇಷನ್ ಕಿಟ್ ಬೇಡ ಎನ್ನುವವರಿಗೆ ಹಣದ ಸಹಾಯ ಮಾಡುವುದಕ್ಕೂ ಮುಂದಾಗಿದ್ದಾರೆ. ಈ ಕೆಲಸವು ಗಣೇಶ್ ಆಚಾರ್ಯ ಫೌಂಡೇಶನ್ ಮೂಲಕ ನಡೆಯಲಿದೆ.
ಓದಿ: ಕೋವಿಡ್ ಗೆದ್ದ ದುನಿಯಾ ವಿಜಿ ಪೋಷಕರು... ಬದುಕಿಸಿಕೊಂಡ ಬಗ್ಗೆ ರೋಚಕ ಕತೆ ಹಂಚಿಕೊಂಡ ನಟ