'ಎಕ್ಸ್ ಕ್ಯೂಸ್ ಮಿ' ಚಿತ್ರದಿಂದ ಸಿನಿಮಾ ಕರಿಯರ್ ಆರಂಭಿಸಿ ಸುಮಾರು 30 ಸಿನಿಮಾಗಳಲ್ಲಿ ಅಭಿನಯಿಸಿರುವ ಅಜಯ್ ರಾವ್ ಇದೀಗ 'ಶೋಕಿವಾಲ' ಆಗಿ ತೆರೆ ಮೇಲೆ ಮಿಂಚಲು ಬರುತ್ತಿದ್ದಾರೆ. ಹೌದು, 'ಶೋಕಿವಾಲ' ಅಜಯ್ ರಾವ್ ನಟಿಸುತ್ತಿರುವ ಹೊಸ ಸಿನಿಮಾ ಹೆಸರು.
ಚಮಕ್, ಅಯೋಗ್ಯ ಸಿನಿಮಾಗಳನ್ನು ನಿರ್ಮಿಸಿದ್ದ ಕ್ರಿಸ್ಟಲ್ ಪಾರ್ಕ್ ಸಂಸ್ಥೆಯ ಟಿ.ಆರ್. ಚಂದ್ರಶೇಖರ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಮೊದಲ ಪತ್ರಿಕಾಗೋಷ್ಠಿಯಲ್ಲಿ ನಿಮಾಪಕರು ತಮ್ಮ ಚಿತ್ರದ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಇದೀಗ ಚಿತ್ರದ ಹೆಸರು ರಿವೀಲ್ ಆಗಿದ್ದು, ಅಜಯ್ ರಾವ್ಗೆ ಸಂಜನಾ ಆನಂದ್ ಜೋಡಿಯಾಗಿ ನಟಿಸುತ್ತಿದ್ದಾರೆ. ಸಂಜನಾ ಈ ಮೊದಲು 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಬಿ.ತಿಮ್ಮೇಗೌಡ (ಜಾಕಿ) ಈ ಸಿನಿಮಾಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ತಿಮ್ಮೇಗೌಡ ಭಾಗ್ಯದ ಬಳೆಗಾರ, ದೇವರು ಕೊಟ್ಟ ತಂಗಿ, ಲಕ್ಕಿ, ಅಧ್ಯಕ್ಷ, ರನ್ನ, ವಿಕ್ಟರಿ, ಕೆಜಿಎಫ್ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಇನ್ನು ಮಂಡ್ಯ, ಚನ್ನಪಟ್ಟಣ, ಮಾಗಡಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗುವುದು ಎಂದು ಚಿತ್ರತಂಡ ಹೇಳಿದೆ. ಚಿತ್ರಕ್ಕೆ ಪ್ರಶಾಂತ್ ರಾಚಪ್ಪ ಸಂಭಾಷಣೆ, ನವೀನ್ ಕುಮಾರ್ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಸಂಗೀತವಿದೆ. ಜಯಂತ್ ಕಾಯ್ಕಿಣಿ, ಡಾ. ವಿ.ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಘೌಸ್ ಫೀರ್ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ, ವಿಕ್ರಮ್ ಮೋರ್ ಸಾಹಸ, ಮೋಹನ್ ನೃತ್ಯ ನಿರ್ದೇಶನ ಈ ಸಿನಿಮಾಗಿದೆ. ಶರತ್ ಲೋಹಿತಾಶ್ವ, ಗಿರಿ, ಮುನಿರಾಜು, ಪ್ರಮೋದ್ ಶೆಟ್ಟಿ, ತಬಲಾ ನಾಣಿ, ಅರುಣ ಬಾಲರಾಜ್, ನಾಗರಾಜ ಮೂರ್ತಿ, ಲಾಸ್ಯ, ವಾಣಿ ಹಾಗೂ ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.