ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ ವಿಲನ್ ಮಾಯಾಳಾಗಿ ನಟಿಸಿ ಮನೆ ಮಾತಾಗಿರುವ ಚೆಂದುಳ್ಳಿ ಚೆಲುವೆಯ ಹೆಸರು ಐಶ್ವರ್ಯಾ ಬಸ್ಪುರೆ. ಯಾರೇ ನೀ ಮೋಹಿನಿಯಲ್ಲಿ ಬ್ಯೂಟಿಫುಲ್ ವಿಲನ್ ಆಗಿ ನಟಿಸಿ ಸೈ ಎನಿಸಿಕೊಂಡಿರುವ ಐಶ್ವರ್ಯಾ ಬಸ್ಪುರೆ ಕಳೆದ ವರುಷದ ಜೀ ಕುಟುಂಬ ಅವಾರ್ಡ್ನಲ್ಲಿ ಬೆಸ್ಟ್ ವಿಲನ್ ಪ್ರಶಸ್ತಿ ಪಡೆದಿದ್ದಾರೆ.
ಕಾಲೇಜು ದಿನಗಳಿಂದಲೇ ಫ್ಯಾಷನ್ ಶೋಗಳಲ್ಲಿ ಭಾಗವಹಿಸುತ್ತಿದ್ದ ಐಶ್ವರ್ಯಾ ಸೌತ್ ಇಂಡಿಯಾ ಕ್ವೀನ್ ಕಾಂಟೆಸ್ಟ್ನಲ್ಲಿ ಕಾಣಿಸಿಕೊಂಡರು. ಪ್ರಸ್ತುತ ಶೋನಲ್ಲಿ ಓವರ್ ಆಲ್ ವಿನ್ನರ್ ಆಗಿ ಹೊರಹೊಮ್ಮಿದ ಐಶ್ವರ್ಯಾ ಮಿಸ್ ಕರ್ನಾಟಕದ ಜೊತೆಗೆ ಮಿಸ್ ಕಾನ್ಫಿಡೆನ್ಸ್ ಪ್ರಶಸ್ತಿಯನ್ನು ಕೂಡಾ ತಮ್ಮ ಮುಡಿಗೇರಿಸಿಕೊಂಡರು. ಮುಂದೇ ಅದೇ ಐಶ್ವರ್ಯಾ ಅವರ ಬಣ್ಣದ ಯಾನಕ್ಕೆ ಮುನ್ನುಡಿಯನ್ನು ಕೂಡಾ ಬರೆಯಿತು ಎಂದರೆ ತಪ್ಪಾಗಲಾರದು.
ನಟಿಸುವ ಹಂಬಲ ಜಾಸ್ತಿಯಾದಾಗ ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ಐಶ್ವರ್ಯಗೆ ಉದಯ ವಾಹಿನಿಯಲ್ಲಿ ಆರಂಭವಾಗಲಿರುವ ಧಾರಾವಾಹಿಯಿಂದ ಆಡಿಶನ್ ಕರೆ ಬಂತು. ಆಡಿಶನ್ ಕೊಟ್ಟ ಒಂದು ವಾರದ ಬಳಿಕ ವಾಹಿನಿಯಿಂದ ಫೋಟೋಶೂಟ್ನಲ್ಲಿ ಭಾಗವಹಿಸುವಂತೆ ಕರೆ ಬಂತು. ಹೋಗಿ ನೋಡಿದರೆ ಲೀಡ್ ರೋಲ್ ದೊರಕಿದೆ.
ಮಹಾಸತಿ ಧಾರಾವಾಹಿಯಲ್ಲಿ ನಾಯಕಿ ಆರತಿಯಾಗಿ ನಟಿಸಿದ ಐಶ್ವರ್ಯಾ ಮೊದಲ ಧಾರಾವಾಹಿಯಲ್ಲೇ ವೀಕ್ಷಕರ ಮನ ಸೆಳೆದರು. ಒಂದರ್ಥದಲ್ಲಿ ಹೇಳಬೇಕೆಂದರೆ ನಟನೆಯ ಗಂಧ ಗಾಳಿ ಗೊತ್ತಿಲ್ಲದ ಆಕೆ ನಟನೆಯ ಬಗ್ಗೆ ತಿಳಿದದ್ದೇ ಮಹಾಸತಿ ಧಾರಾವಾಹಿಯಲ್ಲಿಯಂತೆ.
ಮಹಾಸತಿ ಧಾರಾವಾಹಿಯಲ್ಲಿ ಅಳುಮುಂಜಿ ವಿಧವೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಐಶ್ವರ್ಯಾ ಬಸ್ಪುರೆ ಮುಂದೆ ನಟಿಸಿದ್ದು ರಗಡ್ ಲುಕ್ ನಲ್ಲಿ. ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ ಅವಕಾಶ ಪಡೆದ ಆಕೆ ಇಲ್ಲಿ ಪಕ್ಕಾ ನೆಗೆಟಿವ್ ರೋಲ್ನಲ್ಲಿ ಮಿಂಚಲಾರಂಭಿಸಿದರು.
ಇಂತಿಪ್ಪ ಮುದ್ದು ಮುಖದ ಸುಂದರಿಗೆ ತೆಲುಗು ಭಾಷೆಯಿಂದಲೂ ನಟಿಸುವ ಅವಕಾಶ ಬಂದಿತ್ತು. ಆದರೆ ಶೂಟಿಂಗ್ಗೆ ಡೇಟ್ಸ್ ಸಮಸ್ಯೆ ಬರುವ ಕಾರಣ ತೆಲುಗಿನತ್ತ ಮುಖ ಮಾಡಲಿಲ್ಲ. ನನ್ನ ಮೊದಲ ಪ್ರಾಮುಖ್ಯತೆ ಏನಿದ್ದರೂ ಕನ್ನಡ ಭಾಷೆಗೆ, ಉಳಿದದ್ದೆಲ್ಲಾ ಆಮೇಲೆ ಎಂದು ನಗುತ್ತಾ ಹೇಳುವ ಐಶ್ವರ್ಯಾ, ಶ್ರುತಿ ನಾಯ್ಡು ನಿರ್ದೇಶನದ ಪ್ರೀಮಿಯರ್ ಪದ್ಮಿನಿಯಲ್ಲಿ ಅಭಿನಯಿಸಿದ್ದಾರೆ.