ಕೋಮಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕೆಂಪೇಗೌಡ-2 ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ಜರುಗಿತು. ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಟಿ.ಸುನಿಲ್ ಕುಮಾರ್ ಅವರು ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಆಡಿಯೋ ಬಿಡುಗಡೆ ಮಾಡಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಟಿ.ಸುನಿಲ್ ಕುಮಾರ್, ಪೊಲೀಸ್ ಅಧಿಕಾರಿಗಳ ಬಗ್ಗೆ ಸಿನಿಮಾಗಳಲ್ಲಿ ತೋರಿಸುವ ಬಗ್ಗೆ ಮಾತನಾಡಿದರು. ಹಾಗೇ ಪೊಲೀಸರ ಒಂದು ಕಥೆಯನ್ನೂ ಹೇಳಿದರು. ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಅಲಿ ಕೂಡಾ ಕಾರ್ಯಕ್ರಮಕ್ಕೆ ಚೆನ್ನೈನಿಂದ ಬಂದಿದ್ದರು. ಹಿರಿಯ ಪೊಲೀಸ್ ಅಧಿಕಾರಿ ದೇವರಾಜ್, ಜಗ್ಗೇಶ್ , ಥ್ರಿಲ್ಲರ್ ಮಂಜು ಹಾಗೂ ಇನ್ನಿತರರು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು.
ಕೋಮಲ್ ಈಗ ಕೋಮಲ್ ಕುಮಾರ್ ಆಗಿ ಸುಮಾರು 4 ವರ್ಷಗಳ ಬಳಿಕ ಖಡಕ್ ಪೊಲೀಸ್ ಅಧಿಕಾರಿಯಾಗಿ ವಾಪಸಾಗಿದ್ದಾರೆ. ಅದೂ ಕೂಡಾ ಸ್ಲಿಮ್ ಆಗಿ. ಸುದೀಪ್ ಅಭಿನಯದ ಕೆಂಪೇಗೌಡ ಸಿನಿಮಾವನ್ನು ನಿರ್ಮಿಸಿದ್ದ ನಿರ್ಮಾಪಕ ಶಂಕರೇಗೌಡ ಕಥೆ ಬರೆದು ಕೆಂಪೇಗೌಡ-2 ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಪಂಚಮುಖಿ ಹನುಮಾನ್ ಸಿನಿಪ್ರೊಡಕ್ಷನ್ ಅಡಿ ವಿನೋದ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಕ್ರಿಕೆಟರ್ ಶ್ರೀಶಾಂತ್ ಅಭಿನಯಿಸುತ್ತಿರುವುದು ವಿಶೇಷ. ರಿಶಿಕಾ ಶರ್ಮಾ, ಯೋಗೇಶ್, ತೆಲುಗು ನಟ ನಾಗಬಾಬು, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.